River pollution from SEZ | ವಿಶೇಷ ಆರ್ಥಿಕ ವಲಯದಿಂದ ಮಲಿನ ನೀರು ಫಲ್ಗುಣಿ ನದಿಗೆ: ಸ್ಥಳೀಯರ ಆಕ್ರೋಶ
ಸಾಂಕ್ರಾಮಿಕ ರೋಗದ ಭೀತಿ
ಕೊಳೆತು ನಾರುತ್ತಿರುವ ಫಲ್ಗುಣಿ
ನಾಗರಿಕ ಹೋರಾಟ ಸಮಿತಿ ಪರಿಶೀಲನೆ
ಕೂಳೂರು ಸಮೀಪ ಪಲ್ಗುಣಿ ನದಿಗೆ ಸೇರುವ ತೋಕೂರು ಹಳ್ಳಕ್ಕೆ ಬೈಕಂಪಾಡಿ, ಜೋಕಟ್ಟೆ, sez ಕಾರಿಡಾರ್ ರಸ್ತೆ ಬಳಿ ಬೈಕಂಪಾಡಿ ಕೈಗಾರಿಕ ವಲಯದಲ್ಲಿರುವ ಮಧ್ಯಮ ಗಾತ್ರದ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಮಾಲಿನ್ಯದ ನೀರನ್ನು ನೇರವಾಗಿ ಹರಿಯಬಿಟ್ಟಿದ್ದಾರೆ. ಇದರಿಂದ ಪರಿಸರದಲ್ಲಿ ಅಸಹನೀಯ ಸ್ಥಿತಿ ನಿರ್ಮಾಣಗೊಂಡಿದೆ. ತೋಕೂರು ಹಳ್ಳ, ಪಲ್ಗುಣಿ ನದಿ ಈ ಪರಿಸರದಲ್ಲಿ ಪೂರ್ಣವಾಗಿ ಕೊಳೆತು ನಾರುತ್ತಿದೆ. ಮೀನುಗಳು ಸಾಯತೊಡಗಿವೆ. ಗ್ರಾಮಸ್ಥರ ಬಾವಿಗಳ ನೀರು ಹಾಳಾಗಿದ್ದು, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನದಿ ದಂಡೆಯ ಜನತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಗ್ರಾಮಸ್ಥರ ದೂರಿನ ಭಾಗವಾಗಿ ಇಂದು ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಸಮಿತಿಯ ದೂರಿನ ಹಿನ್ನಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೀರ್ತಿ ಕುಮಾರ್ ಮಾಲಿನ್ಯ ನೀರಿನ ವಿವಿಧ ಮೂಲಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಸ್ಯಾಂಪಲ್ ಸಂಗ್ರಹಿಸಿದರು. ಸಮಾಧಾನಕರ ಆಶ್ವಾಸನೆಗಳನ್ನು ನೀಡುವ ಬದಲಿಗೆ ನಿಯಮ ಬಾಹಿರವಾಗಿ ಪಲ್ಗುಣಿ ನದಿಗೆ ಕೈಗಾರಿಕಾ ಮಾಲಿನ್ಯವನ್ನು ಅಕ್ರಮವಾಗಿ ಹರಿಯ ಬಿಡುತ್ತಿರುವ ಕಂಪೆನಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲು, ಪಲ್ಗುಣಿ ನದಿ ಉಳಿಸಲು ಹೋರಾಟ ಸಮಿತಿ ಅಧಿಕಾರಿಗಳಲ್ಲಿ ಮನವಿ ಮಾಡಿತು. ಇಲ್ಲದಿದ್ದಲ್ಲಿ ಸ್ಥಳೀಯ ಗ್ರಾಮಸ್ಥರನ್ನು ಸಂಘಟಿಸಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತು.
dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿನ್ ಫೆರಾವೊ, ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವ, ಸ್ಥಳೀಯ ಮುಖಂಡರಾದ ರವಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.