TB Gang arrested | ಮಂಗಳೂರಲ್ಲಿ ಟಿ.ಬಿ. ಗ್ಯಾಂಗ್ ಖತರ್ನಾಕ್ ಸ್ಕೆಚ್: ಹೆದ್ದಾರಿ ದರೋಡೆ ನಿರತ 8 ಮಂದಿ ಸೆರೆ
ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ದರೋಡೆ ಮಾಡಲು ಸಂಚು ರೂಪಿಸಿದ್ದ ಎಂಟು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾರ್ನಮಿಕಟ್ಟೆಯ ತೌಸಿರ್, ಫರಂಗಿಪೇಟೆಯ ಮೊಹಮ್ಮದ್ ಅರಾಫತ್ ಮತ್ತು ತಸ್ಲೀಂ, ತುಂಬೆ ಹೌಸ್‌ನ ನಾಸಿರ್ ಹುಸೇನ್, ಪುದುವಿನ ಮೊಹಮ್ಮದ್ ರಫೀಕ್, ಮೊಹಮ್ಮದ್ ಸಫ್ವಾನ್, ಮೊಹಮ್ಮದ್ ಜೈನುದ್ದೀನ್ ಮತ್ತು ಉನೈಝ್ ಬಂಧಿತರ ಆರೋಪಿಗಳು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಎಪ್ರಿಲ್ 12ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೊರೋನಾ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ವಿಶೇಷ ತಪಾಸಣೆಯಲ್ಲಿ ಇದ್ದಾಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟು ಗ್ರಾಮದ ಪರಾರಿಯಲ್ಲಿ ಈ ತಂಡವು ಇನ್ನೋವಾ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮಾರಾಕಾಸ್ತ್ರಗಳೊಂದಿಗೆ ನಿಂತುಕೊಂಡು ವಾಹನಗಳನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಿತ್ತು ಎಂದು ತಿಳಿಸಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಎ. ಗಾಂವ್ಕರ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಎಸ್‌ಐಗಳಾದ ರಾಜೇಂದ್ರ ಬಿ. ಪ್ರದೀಪ್ ಟಿ.ಆರ್., ಸಿಸಿಬಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಿಬಿ ಗ್ಯಾಂಗ್ ಎಂದರೇನು...?
ಬಂಧಿತರು ಟಿ.ಬಿ. ಎಂಬ ಹೆಸರಿನ ಗ್ಯಾಂಗ್‌ನ ಸದಸ್ಯರು. ಈ ಹೆಸರೇ ಮಂಗಳೂರಿಗೆ ಹೊಸತು. ಇಂತಹ ಒಂದು ಖತರ್ನಾಕ್ ಗ್ಯಾಂಗ್ ಮಂಗಳೂರಿನಲ್ಲಿ ಭೂಗತವಾಗಿ ಕಾರ್ಯಾಚರಿಸುತ್ತಿದೆ. ತೌಸಿರ್ ಮತ್ತು ಬಾತಿಶ್ ಆಲಿಯಾಸ್ ಬಾಸಿತ್ ಈ ಗ್ಯಾಂಗಿನ ಮುಖ್ಯಸ್ಥರಾಗಿದ್ದಾರೆ.
ಇವರಿಬ್ಬರ ಮೊದಲ ಹೆಸರನ್ನು ನಾಮಕರಣ ಮಾಡಿ ಟಿ.ಬಿ. ಗ್ಯಾಂಗ್ ಎಂದು ಇವರು ಹೆಸರಿಟ್ಟುಕೊಂಡಿದ್ದರು.
ಇದರಲ್ಲಿ ಕೆಲ ದುಷ್ಕರ್ಮಿಗಳನ್ನು ಸೇರಿಸಿ ಸೆಟ್ಟಲ್‌ಮೆಂಟ್ ನಡೆಸುತ್ತಿದ್ದರು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರ ಸೂಚನೆ ಮೇರೆ ಈ ಗ್ಯಾಂಗ್ ಕಾರ್ಯಾಚರಿಸುತ್ತಿದೆ.
ಮೆಲ್ಕಾರ್ ಮೂಲದ ಹಾಗೂ ಈಗ ಬೆಂಗಳೂರಿನಲ್ಲಿ ವ್ಯವಹಾರ ಮಾಡುತ್ತಿರುವ ಜೀಯದ್ ಗೆ ತೌಸೀರ್ ಗ್ಯಾಂಗಿನ ಸಫ್ವಾನ್ 12 ಲಕ್ಷ ರೂ. ಹಣ ನೀಡಿದ್ದು, ಅದನ್ನು ಆತ ವಾಸಪ್ ಮಾಡಿರಲಿಲ್ಲ. ಹಾಗಾಗಿ, ಬಾಶಿತ್‌ನ ಸೂಚನೆಯಂತೆ ಜೀಯರ್‌ನ್ನು ಬೆಂಗಳೂರನಿಂದ ಅಪಹರಿಸಿ ಕೊಲೆಗೈಯಲು ಈ ಗ್ಯಾಂಗ್ ಸಂಚು ರೂಪಿಸಿ ಬೆಂಗಳೂರಿಗೆ ತೆರಳಿತ್ತು.
ಆದರೆ, ಅಲ್ಲಿ ಜೀಯದ್ ಕೈಗೆ ಸಿಕ್ಕಿರಲಿಲ್ಲ. ಇದರಿಂದ ಬರಿಗೈಯಲ್ಲಿ ವಾಪಸ್ ಆಗಿ ಮಂಗಳೂರಿನಲ್ಲಿ ಹೆದ್ದಾರಿ ದರೋಡೆಗೆ ಸಂಚು ರೂಪಿಸಿತ್ತು ಎಂದು ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು.