sexual harassment | ಯುವತಿಗೆ ಗುಪ್ತಾಂಗ ತೋರಿಸಿದ: ಒಂದೇ ಗಂಟೆಯೊಳಗೆ ಪೊಲೀಸರ ಬಂಧಿಯಾದ
ಯುವತಿಯೊಬ್ಬರಿಗೆ ಹಾಡ ಹಗಲೇ ತನ್ನ ಗುಪ್ತಾಂಗ ತೋರಿಸುವ ಮೂಲಕ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಮುಂಜಾನೆ ಕೆಲಸಕ್ಕೆ ತೆರಳಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವಂತೆ ನಟಿಸಿ ತನ್ನ ಗುಪ್ತಾಂಗ ತೋರಿಸುವ ಅಸಹ್ಯಕರ ಘಟನೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಘಟನೆಯಿಂದ ಗಾಬರಿಗೊಂಡ ಯುವತಿ ಅಲ್ಲೇ ಸಮೀಪದಲ್ಲಿ ಇದ್ದ ಟೈಲರ್ ಅಂಗಡಿಗೆ ಹೋಗಿ ಸಹಾಯ ಕೋರಿದ್ದಾರೆ. ತಕ್ಷಣ ಅಲ್ಲಿನ ಜನರು ದೌಡಾಯಿಸಿ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಇದನ್ನು ನೋಡಿದ ಕಿಡಿಗೇಡಿ ಯುವಕ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಅಲ್ಲಿದ್ದವರೊಬ್ಬರು ಆತನ ಫೋಟೋ ಕ್ಲಿಕ್ ಮಾಡಿದ್ದರು. ಇದರಿಂದ ಆತನ ಗುರುತು ಸಿಕ್ಕಿದ್ದು, ಈತ ತೊಕ್ಕೊಟ್ಟು ಪಿಲಾರು ನಿವಾಸಿ ಮೊಹಮ್ಮದ್ ಆರೀಫ್(27)ಎಂದು ಗೊತ್ತಾಗಿದೆ.
ಈ ಘಟನೆಯ ಬಗ್ಗೆ ತನಗಾದ ಅನ್ಯಾಯವನ್ನು ವಿವರಿಸಿ ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಒಂದೇ ಗಂಟೆಯೊಳಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಹೇಯ ಕೃತ್ಯ ನಡೆಸಿದ ಮೊಹಮ್ಮದ್ ಆರೀಫ್‌ನನ್ನು ಬಂಧಿಸಿದ್ದಾರೆ.