
bed block scam | ಬೆಡ್ ಬ್ಲಾಕಿಂಗ್ ಹಗರಣ: ಬಿಜೆಪಿ ಶಾಸಕ ಸತೀಶ್ ರೆಡ್ಡಿಯನ್ನು ಬಂಧಿಸಿ- ಮಾಜಿ ಮೇಯರ್ ಆಗ್ರಹ
ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿಯನ್ನು ತಕ್ಷಣ ಬಂಧಿಸಿ ಸಮಗ್ರ ವಿಚಾರಣೆಗೊಳಪಡಿಸಬೇಕು ಎಂದುದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಆಶ್ರಫ್ ಆಗ್ರಹಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಕೊರೋನ ಸೋಂಕು ನಿಯಂತ್ರಣಗೊಳಿಸಲು ಮತ್ತು ಸಾಮಾನ್ಯ ರೋಗಿಗಳಿಗೆ ಆಸ್ಪತ್ರೆ ಬೆಡ್ ಗಳನ್ನು ಹಾಗೂ ಅಗತ್ಯವಿರುದ ಆಮ್ಲಜನಕ ನೀಡಲು ರಾಜ್ಯ ಸರ್ಕಾರ ವಿಫಲರಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರು ನಗರಾದ್ಯಂತ ನೂರಾರು ರೋಗಿಗಳ ಸಾವಿಗೆ ಕಾರಣವಾದ ಬಿಜೆಪಿ ಆಡಳಿತದ ಬಿ.ಬಿ.ಎಂ.ಪಿ. ಯಲ್ಲಿ ಬೆಡ್ ಬ್ಲಾಕ್ ದಂಧೆಯ ಸೂತ್ರಧಾರ ಎನ್ನಲಾದ ಶಾಸಕ ಸತೀಶ್ ರೆಡ್ಡಿಯನ್ನು ತಕ್ಷಣ ಗೃಹ ಇಲಾಖೆ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಈ ಹಗರಣದ ನೈತಿಕ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೊರೋನ ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಲಾಕ್ ಡೌನ್ ನಿಂದ ಕೊರೋನದಿಂದ ಆಗುತ್ತಿರುವ ಜೀವಹಾನಿಗಳ ನಿಯಂತ್ರಣ ಸಾಧ್ಯವಿಲ್ಲ. ಅದಕ್ಕೆ ತಕ್ಕ ವ್ಯವಸ್ಥೆಗಳನ್ನು ಕಲ್ಪಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಆಡಳಿತ ವೈಫಲ್ಯತೆಯಿಂದಾಗಿಯೇ ಇಂದು ಪ್ರತಿದಿನ ಬೀದಿಬದಿಗಳಲ್ಲಿಯೇ ಹಲವಾರು ಹೆಣಗಳು ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯಕೀಯ ನೆರವು ನೀಡುವ ಜವಾಬ್ದಾರಿಯಿಂದ ಸರಕಾರ ಸಂಪೂರ್ಣ ಸೋತಿದೆ ಎಂದು ಅವರು ಹೇಳಿದ್ದಾರೆ.
ಕೊರೋನ ಹೆಸರಲ್ಲಿ ಬಿಜೆಪಿ ಶಾಸಕರು ಮತ್ತು ಸಚಿವರು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಸೇವೆಗಳ ದಂಧೆ ನಡೆಸಿ ಹಣ ಮಾಡುತ್ತಿರುವುದು ಜಗಜ್ಜಾಹೀರು ಗೊಂಡಿದೆ. ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸಿದಂತೆ ಆಗಿದೆ ಸದ್ಯದ ಸರ್ಕಾರದ ಪರಿಸ್ಥಿತಿ. ಜನರು ಆಕ್ರೋಶ ಗೊಂಡು ರೊಚ್ಚಿಗೇಳುವ ಮೊದಲು ಪರಿಹಾರ ಕಂಡುಕೊಳ್ಳಿ ಎಂದು ಅವರು ಕಿವಿಮಾತು ಹೇಳಿದ್ದಾರೆ.