-->
Covid time responsibility - ಜನಪ್ರತಿನಿಧಿಗಳು ಕೋವಿಡ್ ಕಾಲದಲ್ಲಿ ಏನು ಮಾಡಬಹುದು?: ಒಂದು ಚಿಂತನೆ

Covid time responsibility - ಜನಪ್ರತಿನಿಧಿಗಳು ಕೋವಿಡ್ ಕಾಲದಲ್ಲಿ ಏನು ಮಾಡಬಹುದು?: ಒಂದು ಚಿಂತನೆ



ಬರಹ: ರಾಜಾರಾಮ್ ತಲ್ಲೂರು


ಶಾಸಕರೊಬ್ಬರು ಅಕ್ಕಿ ಚೀಲ ಹೊತ್ತರು, ಮನೆಯಲ್ಲೇ ಅಡುಗೆ ಮಾಡಿಸಿ ಹಂಚಿದರು, ಕೇರ್ ಸೆಂಟರಿನಲ್ಲಿ ನಲಿದು ಮನರಂಜಿಸಿದರು, ಆಕ್ಸಿಜನ್ ಸಿಲಿಂಡರ್ ತಾವೇ ಹೊತ್ತು ತಂದರು – ಇವೆಲ್ಲವೂ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಂಡರು.



ಹೌದಾ! ಅದ್ಭುತ ಕೆಲಸ ಮಾರಾಯ್ರೆ… ಶಾಸಕರಂದರೆ ಹೀಗಿರಬೇಕು ಅಂತ ಶುರುವಾಗಿದೆ.

ನಿಜಕ್ಕೆಂದರೆ ಏನೂ ಮಾಡದಿರುವುದಕ್ಕಿಂತ ಇಷ್ಟಾದರೂ ಮಾಡ್ತಾ ಇದಾರಲ್ಲಾ ಜನರ ಮೇಲಿನ ಪ್ರೀತಿಯಿಂದ; ಅದಕ್ಕಾಗಿ ಅವರನ್ನು ಮೆಚ್ಚಬೇಕು.



ಆದರೆ, ಶಾಸಕರು ಮಾಡಬೇಕಾದ ಕೆಲಸ ಅದಲ್ಲ. ಅವರು ಶಾಸನಸಭೆಯ ಸದಸ್ಯರು. ಜೊತೆಗೆ ಜನಪ್ರತಿನಿಧಿ.


ಶಾಸಕರು ಹಾಗಿದ್ರೆ ನಿಜಕ್ಕೂ ಏನು ಮಾಡಬೇಕು/ಮಾಡಬಹುದು?


(ಇಲ್ಲಿ ಕಳೆದ ಒಂದೂವರೆ ವರ್ಷದ್ದು, ಹೇಳೋದಿಲ್ಲ. ಮಿಂಚಿಹೋದದ್ದಕ್ಕೆ ಚಿಂತಿಸಿ ಫಲ ಇಲ್ಲ. ಆದರೆ ಈವತ್ತು ಈ ಕ್ಷಣಕ್ಕೆ ಒಬ್ಬ ಶಾಸಕ ಏನು ಮಾಡಬಹುದು? ಎಂಬುದನ್ನು ನನಗೆ ತೋಚಿದಂತೆ ಪಟ್ಟಿ ಮಾಡಿದ್ದೇನೆ. ಏನಾದರೂ ಬಿಟ್ಟದ್ದಿದ್ದರೆ ಸೇರಿಸಿ.)


೧. ಎಪಿಡೆಮಿಕ್ ಕಾಯಿದೆಯ ನಿಯಮಗಳು ಚಾಲ್ತಿ ಇರುವಾಗ ಜಿಲ್ಲಾಧಿಕಾರಿಗಳು/ತೆಹಶೀಲ್ದಾರರು ಈವೆಂಟ್ ಕಮಾಂಡರ್‌ಗಳಾಗಿ ಕಾರ್ಯಾಚರಿಸುತ್ತಾರೆ. ಅಧಿಕಾರಗಳೆಲ್ಲ ಅವರ ಕೈಯಲ್ಲಿ ಕೇಂದ್ರೀಕೃತವಾಗಿರುತ್ತದೆ. ಹಾಗಾಗಿ ಒಬ್ಬ ಶಾಸಕ ಮಾಡಬಹುದಾದ ಅತ್ಯಂತ ಪರಿಣಾಮಕಾರಿ ಕೆಲಸ ಎಂದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲವೂ ಸುಸೂತ್ರವಾಗಿ, ಭ್ರಷ್ಟಾಚಾರ-ಪಕ್ಷಪಾತ ರಹಿತವಾಗಿ ನಡೆಯುತ್ತಿದೆಯೇ ಮತ್ತು ಅದಕ್ಕೆಲ್ಲ ಅಗತ್ಯ ಫಂಡಿಂಗ್ ರಾಜ್ಯ ಸರ್ಕಾರದಿಂದ ಬರುತ್ತಿದೆಯೇ ಎಂಬುದನ್ನು ಗಮನಿಸಿ, ಅಗತ್ಯ ಬಿದ್ದಲ್ಲಿ ಮಧ್ಯಪ್ರವೇಶಿಸಿ ಸೌಕರ್ಯಗಳನ್ನು ಒದಗಿಸುವುದು.



೨.ಪಂಚಾಯತಿ ಮಟ್ಟದ ಸಮಿತಿಗಳೇನೋ ಆಗಿವೆ. ಆದರೆ ಅವುಗಳ ಕಾರ್ಯಾಚರಣೆಗೆ ದಿಕ್ಕುದಿಸೆ ಇದ್ದಂತಿಲ್ಲ. ಕೊರೊನಾ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟಿಂಗ್ ಕೆಲಸವನ್ನು ಈ ಸಮಿತಿ ವಾರ್ಡ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ, ಯಾವುದೇ ಮುಲಾಜಿಲ್ಲದೆ ಮಾಡುವುದನ್ನು ಖಚಿತಪಡಿಸುವುದು; ಮನೆಬಾಗಿಲಲ್ಲೇ ಟೆಸ್ಟಿಂಗಿಗೆ ಮೊಬೈಲ್ ವಾಹನ ಒದಗಿಸುವುದು, ವರದಿ ಬೇಗ ಸಿಗುವಂತೆ ಮಾಡುವುದು, ಕ್ವಾರಂಟೈನ್/ಐಸೊಲೇಷನ್ ಪ್ರಕ್ರಿಯೆಗಳು ಗ್ರಾಮಮಟ್ಟದಲ್ಲೇ ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಜಾಗ, ಸಿಬ್ಬಂದಿ, ಊಟೋಪಚಾರಗಳ ವ್ಯವಸ್ಥೆ ಮಾಡುವುದು.



೩. ವೃದ್ಧರು, ಮಾನಸಿಕ ಸಮಸ್ಯೆ ಇರುವವರು, ಬೌದ್ಧಿಕ ಸಮಸ್ಯೆಗಳಿರುವವರನ್ನು ಮತ್ತು ಅಗತ್ಯ ಇರುವ “ಅಪಾಯ ವರ್ಗ”ದವರನ್ನು ರಿವರ್ಸ್ ಕ್ವಾರಂಟೈನ್ ಮಾಡಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು.



೩. ರೋಗ ಉಲ್ಭಣಿಸಿದವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಹಾಗೂ ಆಸ್ಪತ್ರೆಯಲ್ಲಿ ಆಕ್ಸಿಜನ್, ಔಷಧಿಗಳಂತಹ ಮೂಲ ಸೌಕರ್ಯಗಳು, ಸಾಕಷ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

೪.ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು/ಆರೈಕೆ ಸಿಬ್ಬಂದಿ ಇಲ್ಲದ ಕಡೆ ಸ್ವಂತ ಪ್ರಯತ್ನದ ಬಲದಿಂದ ತಾತ್ಕಾಲಿಕ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಅಲ್ಲಿ ವೈದ್ಯರು ಬೇರೆ ಮಾನಸಿಕ ಒತ್ತಡಗಳಿಲ್ಲದೆ ಕಾರ್ಯ ನಿರ್ವಹಿಸಲು ಅಗತ್ಯ ಇರುವ ಪ್ರೋತ್ಸಾಹ ನೀಡುವುದು. ಸಿಬ್ಬಂದಿ ಸಂಖ್ಯೆಯ ಹೆಚ್ಚಿಸಲು ಸರ್ಕಾರಕ್ಕೆ ಒತ್ತಡ ತರುವುದು.



೫. ಲಾಕ್‌ಡೌನ್ ಸಮಯದಲ್ಲಿ ವಾರ್ಡ್‌ವಾರು ಔಷಧಿ/ಕಿರಾಣಿ/ತರಕಾರಿ, ಮೀನು/ಮಾಂಸ ಇತ್ಯಾದಿಗಳನ್ನು ಮನೆಬಾಗಿಲಿಗೆ ಒದಗಿಸಲು, ಅಗತ್ಯ ಸ್ವಯಂಸೇವೆಗಳನ್ನು ಒದಗಿಸಲು ಉತ್ಸಾಹಿ ಯುವಕ/ಯುವತಿಯರ ಪಡೆಯನ್ನು ಪಕ್ಷ ರಹಿತವಾಗಿ ರೆಡ್‌ಕ್ರಾಸ್ ಅಡಿಯಲ್ಲಿ ಸಂಘಟಿಸಿ, ಕಾರ್ಯಾಚರಣೆಗಿಳಿಸುವುದು.



೬. ವಾರ್ಡುವಾರು ಆರ್ಥಿಕ ಸಮಸ್ಯೆಗೀಡಾಗಿರುವವರನ್ನು ಮನೆವಾರು ಗುರುತಿಸಿ, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒಂದೋ ಸರ್ಕಾರದಿಂದ ಇಲ್ಲವೇ ದಾನಿಗಳಿಂದ ಒದಗಿಸಿ, ಅವರ ಮನೆಯ ಒಲೆ ಉರಿಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.



೭. ಆಸ್ಪತ್ರೆಗೆ ಹೊಸ ಸೌಕರ್ಯಗಳನ್ನು ಕೇಂದ್ರ/ರಾಜ್ಯ ಸರ್ಕಾರಗಳು ನೀಡುತ್ತಿರುವಾಗ, ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ತಾಲೂಕು ಆಸ್ಪತ್ರೆ/ಜಿಲ್ಲಾಸ್ಪತ್ರೆಗೆ ದೀರ್ಘಕಾಲಿಕವಾಗಿ ಏನು ಸೌಕರ್ಯಗಳು ಬೇಕೋ ಅವನ್ನು ಆದ್ಯತೆಯ ಮೇರೆಗೆ ಒದಗಿಸಿಕೊಳ್ಳುವುದು.



೮. ಸ್ಮಶಾನಗಳಲ್ಲಿ ತುರ್ತಾಗಿ ವಿದ್ಯುತ್ ಚಿತಾಗಾರ ಒದಗಿಸುವುದು; ಅಲ್ಲಿ ರೆಡ್‌ಕ್ರಾಸ್ ಮೂಲಕ ಗೌರವಯುತ ಶವಸಂಸ್ಕಾರಕ್ಕೆ ಏರ್ಪಾಡು ಮಾಡುವುದು.



೯. ತಾಲೂಕು ಮಟ್ಟದಲ್ಲಿ ಹೆಲ್ಪ್ ಲೈನ್/ವಾರ್‌ರೂಂ ರಚಿಸಿ 24x7 ಪರಿಸ್ಥಿತಿಗಳ ಮೇಲೆ ಗಮನ ಇರಿಸುವುದು ಮತ್ತು ಆಪತ್ತಿನ ಸನ್ನಿವೇಶಗಳನ್ನು ಮುಂದಾಗಿ ಗುರುತಿಸಿ, ಜೀವಹಾನಿ ಆಗದಂತೆ ಎಚ್ಚರ ವಹಿಸುವುದು.



೧೦. ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಆಗದಂತೆ, ಅನ್ಯಾಯ ಆಗದಂತೆ ನಿಗಾ ವಹಿಸುವುದು.

೧೧. ವ್ಯಾಕ್ಸೀನು ಲಭ್ಯತೆಯನ್ನು ಗಮನದಲ್ಲಿರಿಸಿಕೊಂಡು, “ಅಪಾಯವರ್ಗ” ಮತ್ತು ಕೊವಿಡ್ ಮುಂಚೂಣಿಯ ವಾರಿಯರ್‌ಗಳಿಗೆ ಆದ್ಯತೆಯ ಮೇರೆಗೆ ವ್ಯಾಕ್ಸೀನ್ ಒದಗಿಸಲು ವಾರ್ಡ್ ಮಟ್ಟದಲ್ಲಿ ನಿಗಾ ಇರಿಸಿಕೊಳ್ಳುವುದು.



೧೨. ಸಾರ್ವಜನಿಕವಾಗಿ ಸಾಮಾಜಿಕ ಅಂತರ/ಮಾಸ್ಕ್ ಧಾರಣೆ ಖಚಿತಪಡಿಸಿಕೊಳ್ಳಲು ನಗರ ಸ್ವಯಂಸೇವಕರ ಪಡೆ ಸಜ್ಜುಗೊಳಿಸಿ, ಅದನ್ನು ರೆಡ್‍ಕ್ರಾಸ್ ಅಡಿಯಲ್ಲಿ ಚಾಲನೆಗೆ ತರುವುದು.



೧೩. ಕೊವಿಡ್ ಅಲ್ಲದ ಆರೋಗ್ಯ ಸಮಸ್ಯೆಗಳಿಗೆ, ಹೆರಿಗೆ-ಶಿಶುಪಾಲನೆಗೆ ಸೂಕ್ತ ಸೌಲಭ್ಯಗಳು ಸುಗಮವಾಗಿ ಕಾರ್ಯಾಚರಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.



೧೪.ವಿದ್ಯಾರ್ಥಿಗಳಿಗೆ ಮನೆಯಿಂದಲೇ ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಕರ್ಯ, ಸಲಕರಣೆಗಳು ಪ್ರತೀ ವಾರ್ಡಿನಲ್ಲೂ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.



೧೫. ಬೇರೆ ಊರುಗಳಿಂದ ಬರುವವರು-ಹೋಗುವವರು ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.



೧೬. ಅನಗತ್ಯವಾಗಿ ಮೀಟಿಂಗ್ ಕರೆದು ಕೆಲಸ ಮಾಡುವವರ ಸಮಯ ಹಾಳು ಮಾಡುವ ಬದಲು, ವರದಿಗಳು ಮತ್ತು ಬೆಳವಣಿಗೆಗಳು ಕೈ ಬೆರಳ ತುದಿಯಲ್ಲಿ ಲಭ್ಯ ಇರುವಂತೆ ವ್ಯವಸ್ಥೆಯೊಂದನ್ನು ಕ್ಷೇತ್ರಮಟ್ಟದಲ್ಲೇ ರೂಪಿಸಿಕೊಳ್ಳುವುದು; ಅದಕ್ಕೆ ಅಗತ್ಯ ಬಿದ್ದರೆ ವಾರ್‌ರೂಂ ತಂಡವೊಂದನ್ನು ಸನ್ನದ್ಧವಾಗಿರಿಸುವುದು.



೧೭. ಕೊವಿಡ್ ಕಾರಣಕ್ಕೆ ಸಾವಿಗೀಡಾದವರಿಗೆ ಸೂಕ್ತ ಪರಿಹಾರಗಳೇನಾದರೂ ಸಿಗುವುದಿದ್ದರೆ ಒದಗಿಸುವುದು, ಅವರ ವಿಮೆ-ದಾಖಲೆಗಳು ಇತ್ಯಾದಿ ಪೋಸ್ಟ್ ಕೊವಿಡ್ ಆವಶ್ಯಕತೆಗಳನ್ನು ಹೆಲ್ಪ್‌ಲೈನ್ ಮೂಲಕ ಪೂರೈಸಲು ಸರ್ಕಾರದ ಕಡೆಯಿಂದ ಇರುವ ಅಗತ್ಯಗಳು ಸುಗಮವಾಗಿ ನಡೆಯುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.


Ads on article

Advertise in articles 1

advertising articles 2

Advertise under the article