CT Ravi Rice controversy- ಬಿಟ್ಟಿ ಪ್ರಚಾರಕ್ಕೆ ಪುಕ್ಕಟೆ ಅಕ್ಕಿ ವಿತರಣೆ: ಸಿ.ಟಿ. ರವಿ ದಾನ ನೀಡಿದ ಅಕ್ಕಿ ಅಸಲಿಯತ್ತೇನು ?
ಚಿಕ್ಕಮಗಳೂರು: ಕೊರೋನಾ ಕಾಲದಲ್ಲಿ ಜನ ಸಂಕಷ್ಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಲಾಕ್‌ಡೌನ್ ಅಂದರೆ ರಾಜಕಾರಣಿಗಳಿಗೆ ಬಿಟ್ಟಿ ಪ್ರಚಾರ... ಈ ಸಂಕಷ್ಟ ಕಾಲದಲ್ಲೂ ಅಮಾನವೀಯ ನಮಗೆ ಕೊಡಬೇಕಾದ ಅಕ್ಕಿಯನೇ ಕೊಟ್ಟು ಬಿಟ್ಟು ಫೋಟೋ ತೆಗೆಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಚೆಂದ ಏನಿತ್ತು ?
ಇಂಥದ್ದೊಂದು ಪ್ರಶ್ನೆ ಈಗ ಕಳಸಾಪುರ ಸಮೀಪದ ಕಳ್ಳಿ ಕೊಪ್ಪಲು ಗ್ರಾಮಸ್ಥರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ. ಟಿ .ರವಿಗೆ ಹಾಕಿದ್ದಾರೆ .
ಕಳ್ಳಿಕೊಪ್ಪ ಗ್ರಾಮದ ಒಟ್ಟು 75 ಜನರಿಗೆ ಕೊರೋನ ಸೋಂಕು ತಗಲಿತ್ತು. ಹಾಗಾಗಿ, ಈ ಗ್ರಾಮವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ಸ್ಥಳೀಯ ಶಾಸಕ ಸಿ. ಟಿ. ರವಿ ಅಧಿಕಾರಿಗಳ ಜೊತೆ ತೆರಳಿ ತಲಾ 10 ಕಿಲೋ ಅಕ್ಕಿ ಒಳಗೊಂಡಂತೆ ಆಹಾರದ ಕಿಟ್ ವಿತರಿಸಿದ್ದರು.
ಪುಕ್ಕಟೆಯಾಗಿ ಅಕ್ಕಿ ಸೇರಿದಂತೆ ಇತರೆ ವಸ್ತು ಸಿಕ್ಕಿತು ಎಂದು ಸಂತ್ರಸ್ತ ಜನರೂ ಖುಷ್ ಆಗಿದ್ದರು. ತಮಾಷೆಯೆಂದರೆ ತಮ್ಮ ಪಾಲಿನ ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋದಾಗ ಬಯಲಾದ ಸತ್ಯವೇ ಬೇರೆಯಾಗಿತ್ತು!!
ನಿಮಗೆ ಕೊಡಬೇಕಾದ ಪಡಿತರವನ್ನು ಈಗಾಗಲೆ ಕೊಟ್ಟು ಆಗಿದೆ ಎಂದು ಅಂಗಡಿಯವ ಹೇಳಿದ್ದಾನೆ.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅಂಗಡಿಯವನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ಸಿ .ಟಿ. ರವಿ ನಿಮಗೆ ಅಕ್ಕಿ ಸೇರಿದಂತೆ ಪಡಿತರ ಕೊಟ್ಟಿದ್ದಾರಲ್ಲ ; ಇನ್ನೆಲ್ಲಿ ಕೊಡುವುದು ಎಂದು ಅಂಗಡಿ ಮಾಲೀಕರು ದಬಾಯಿಸಿದ್ದಾರೆ.
ಸತ್ಯ ಸಂಗತಿ ಹೊರ ಬರುತ್ತಿದ್ದಂತೆ ರೊಚ್ಚಿಗೆದ್ದ ಜನ ನಮ್ಮಕ್ಕೀನ ನಮ್ಗೆ ಪುಕ್ಕಟೆ ಕೊಟ್ಟಿದೀವಿ ಅಂತ ಶಾಸಕರು ಫೋಟೊ ಯಾಕ್ ತೆಗೆಸೊಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಶಾಸಕ ಸಿ. ಟಿ. ರವಿ ಸ್ಪಷ್ಟನೆ : ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಸಿ.ಟಿ. ರವಿ, ತಾವು ನೀಡಿರುವ ಅಕ್ಕಿಯನ್ನು ಪಂಚಾಯಿತಿ ವತಿಯಿಂದ ವಿತರಿಸಲಾಗಿದೆಯೇ ಹೊರತು ತಾನು ನೀಡಿಲ್ಲ ಎಂದು ಹೇಳಿದ್ದಾರೆ .
ಗ್ರಾಮದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದಾಗ ಅಲ್ಲಿನ ಜನ ಪಡಿತರ ಅಂಗಡಿಗೆ ಹೋಗುವಂತಿಲ್ಲ. ಹಾಗಾಗಿ, ಪಂಚಾಯಿತಿ ವತಿಯಿಂದಲೇ ಪಡಿತರವನ್ನು ವಿತರಿಸಬೇಕೆಂಬ ನಿಯಮವಿದೆ. ಅದರಂತೆ ಅಕ್ಕಿಯನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ .
ಅಕ್ಕಿ ಹೊರತುಪಡಿಸಿ ಉಳಿದ ಅಗತ್ಯ ವಸ್ತುಗಳ ಕಿಟ್ ತಾವು ಕೊಟ್ಟಿದ್ದು. ಆದರೆ, ಅನಗತ್ಯ ವಿವಾದ ಸೃಷ್ಟಿಸಲಾಗಿದೆ. ಈವರೆಗೆ ತನ್ನ ಕ್ಷೇತ್ರದಲ್ಲಿ 9 ಸಾವಿರ ಕಿಟ್ ವಿತರಿಸಲಾಗಿದೆ. ಈ ರೀತಿಯಾಗಿ ತನಗೆ ಪ್ರಚಾರ ಪಡೆಯುವ ಅವಶ್ಯಕತೆ ಇಲ್ಲ ಎಂದು ರವಿ ಸ್ಪಷ್ಟಪಡಿಸಿದ್ದಾರೆ.