defamation notice against Baba Ramdev- ಬಾಬಾ ರಾಮದೇವ್ ವಿರುದ್ಧ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಪತಂಜಲಿ ಯೋಗ ಗುರು ಬಾಬಾ ರಾಮದೇವ್‌ಗೆ ಸಂಕಷ್ಟ ಎದುರಾಗಿದೆ. ಅಲೋಪತಿ ವೈದ್ಯ ಪದ್ಧತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರಾಮ್‌ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ.
ತಮ್ಮ ಹೇಳಿಕೆಯ ಬಗ್ಗೆ 15 ದಿನಗಳಲ್ಲಿ ಬೇಷರತ್ ಕ್ಷಮೆಯಾಚನೆ ಮಾಡಬೇಕು ಇಲ್ಲದಿದ್ದರೆ 1000 ಕೋಟಿ ರೂಪಾಯಿ ನಷ್ಟ ಪರಿಹಾರ ಭರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ತನ್ನ ದಾವೆಯಲ್ಲಿ ಕೇಳಿಕೊಂಡಿದೆ.
ರಾಮದೇವ್ ಹೇಳಿಕೆಯಿಂದ ರಾಜ್ಯದಲ್ಲಿ ಅಲೋಪತಿ ವೃತ್ತಿ ನಿರ್ವಹಿಸುತ್ತಿರುವ ಸುಮಾರು 2000 ವೈದ್ಯರ ವೃತ್ತಿಗೌರವಕ್ಕೆ ಧಕ್ಕೆ ಬಂದಿದೆ. ಹೀಗಾಗಿ ದಾವೆಯಲ್ಲಿ ಅವರೆಲ್ಲರೂ ಭಾಗಿಯಾಗಲಿದ್ದಾರೆ ಎಂದು ನೋಟೀಸ್‌ನಲ್ಲಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಕಲಂ 499ರ ಪ್ರಕಾರ ಯೋಗಗುರು ಬಾಬಾ ರಾಮ್‌ದೇವ್ ಅವರ ಹೇಳಿಕೆ ಅಪರಾಧಿಕ ಕ್ರಿಯೆಯಾಗಿದೆ. ಹೀಗಾಗಿ ಅವರು ಲಿಖಿತ ಕ್ಷಮೆಯಾಚನೆ ಮಾಡಬೇಕು.
ಇಲ್ಲದಿದ್ದರೆ, ಪ್ರತಿಯೊಬ್ಬ ಸದಸ್ಯರಿಗೆ ತಲಾ 50 ಲಕ್ಷ ಪ್ರಕಾರ ಒಟ್ಟು 1000 ಕೋಟಿ ರೂಪಾಯಿ ನಷ್ಟ ಪರಿಹಾರ ಭರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ನೋಟೀಸ್‌ನಲ್ಲಿ ತಾಕೀತು ಮಾಡಿದೆ.
ಇದೇ ವೇಳೆ, ಯೋಗಗುರು ರಾಮದೇವ್ ತಾವು ನೀಡಿದ ಹೇಳಿಕೆ ಸುಳ್ಳು ಮತ್ತು ತಮ್ಮ ಆರೋಪಗಳನ್ನು ವಾಪಸ್ ತೆಗೆಯುವುದಾಗಿ ಹೇಳುವ ವೀಡಿಯೋ ಕ್ಲಿಪ್ಪಿಂಗ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚುರಪಡಿಸಬೇಕು ಎಂದು ನೋಟೀಸ್‌ನಲ್ಲಿ ಆಗ್ರಹಿಸಲಾಗಿದೆ.
ಪತಂಜಲಿಯಿಂದ ಹೊರತರಲಾದ ಕೊರೊನಿಲ್ ಕಿಟ್ ಕೊರೋನಾ ರೋಗಕ್ಕೆ ಮದ್ದು ಎಂಬ ಆಧಾರರಹಿತ ಪ್ರಚಾರವನ್ನು ತಕ್ಷಣ ಹಿಂದೆ ಪಡೆಯಬೇಕು ಎಂದು ಭಾರತೀಯ ವೈದ್ಯ ಸಂಘದ ನೋಟೀಸ್‌ನಲ್ಲಿ ಒತ್ತಾಯಿಸಿದೆ. ಇಲ್ಲದಿದ್ದರೆ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅದು ಎಚ್ಚರಿಕೆ ನೀಡಿದೆ.