Delhi HC on Goutham Gambhir- ಕೋವಿಡ್ ಔಷಧಿ ದಾಸ್ತಾನು: ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತಿತರರ ವಿರುದ್ಧ ದೆಹಲಿ ಹೈಕೋರ್ಟ್ ಗರಂ
- ದೇಶದ ಜನರು ಔಷಧ ಕೊರತೆ ಎದುರಿಸುತ್ತಿದ್ದಾರೆ.
- ರಾಜಕೀಯ ನಾಯಕರಿಂದ ಔಷಧ ಸಂಗ್ರಹ ಅಕ್ರಮ
- ದೆಹಲಿ ಸಂಸದ ಗೌತಮ್ ಗಂಭೀರ್ ಅವರನ್ನು ಹೈಕೋರ್ಟ್ ತರಾಟೆ
- ಸಂಸದರ ಕ್ರಮ ಸರಿಯಲ್ಲ; ದೆಹಲಿ ಹೈಕೋರ್ಟ್ ಆಕ್ರೋಶ
ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಬಳಸುವ ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವ ರಾಜಕೀಯ ಮುಖಂಡರು ಹಾಗೂ ಸಂಸದರನ್ನು ದೆಹಲಿ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಜನರು ಔಷಧ ಕೊರತೆಯಿಂದ ತೊಂದರೆ ಎದುರಿಸುತ್ತಿರುವ ಸಂದರ್ಭದಲ್ಲಿ ಮೆಡಿಸಿನ್ ಲಭ್ಯತೆ ಅತಿ ಉಪಯುಕ್ತ. ದಾಸ್ತಾನು ಕೊರತೆಯ ಈ ಸಂದರ್ಭದಲ್ಲಿ ಅದನ್ನು ಅಕ್ರಮವಾಗಿ ರಾಜಕೀಯ ನಾಯಕರು ಸಂಗ್ರಹಿಸಿಟ್ಟುಕೊಳ್ಳುವುದು ಸರಿಯಲ್ಲ ಮತ್ತು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಔಷಧಗಳನ್ನು ರಾಜಕಾರಣಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದು ವೈದ್ಯಕೀಯ ಮಾಫಿಯಾ ಮತ್ತು ರಾಜಕಾರಣಿಗಳ ನಡುವಿನ ನಂಟಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಡಾ ದೀಪಕ್ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಸಾರ್ವಜನಿಕ ಹಿತ ಕಾಪಾಡುವುದು ರಾಜಕೀಯ ನಾಯಕರ ಉದ್ದೇಶವಾಗಿದ್ದರೆ ಅವರು ತಮ್ಮ ಬಳಿ ಇರುವ ಔಷಧಗಳನ್ನು ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆ (DGHS) ಒಪ್ಪಿಸಬೇಕು. ಅವರು ಅದನ್ನು ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸುತ್ತಾರೆ ಎಂದು ಪೀಠ ಹೇಳಿದೆ.
ಹಾಲಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರ ಬಳಿ ಔಷಧ ಸಂಗ್ರಹ ಇರುವ ಕುರಿತು ನ್ಯಾಯಾಲಯ ಅತೃಪ್ತಿ ಸೂಚಿಸಿ, ಇಂತಹ ಅಭಾವದ ವೇಳೆಯೂ ಔಷಧ ಮಾರಾಟಗಾರರ ಮೂಲಕ ಅವರು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಔಷಧ ಹೇಗೆ ಸಂಗ್ರಹಿಸಿದರು ಎಂದು ಪ್ರಶ್ನಿಸಿತು.
ಅಕ್ರಮವಾಗಿ ಸಂಗ್ರಹಿಸಿಟ್ಟ ಔಷಧಗಳನ್ನು ವಶಪಡಿಸಿಕೊಳ್ಳುವುದಾಗಿ ದೆಹಲಿ ಪೊಲೀಸರು ವಿಚಾರಣೆ ವೇಳೆ ತಿಳಿಸಿದರಾದರೂ, ನ್ಯಾಯಾಲಯವು ಈ ವೇಳೆ "ರಾಜಕೀಯ ಮುಖಂಡರು ತಮ್ಮನ್ನು ತಾವು ತಿದ್ದಿಕೊಳ್ಳಬೇಕು. ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸುವುದಿಲ್ಲ" ಎಂದಿತು.
ಸಂಸದರು ತಮ್ಮ ರಾಜಕೀಯ ಲಾಭಕ್ಕಾಗಿ ಮೆಡಿಸಿನ್ ಸಂಗ್ರಹಿಸಿಲ್ಲ ಎಂದು ನಾವು ಭಾವಿಸುತ್ತೇವೆ ಹಾಗೂ ಅವರಿಂದ ನಾವು ಅದನ್ನೇ ನಿರೀಕ್ಷಿಸುತ್ತೇವೆ. ಅಂತಹ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲೆಂದು ಡಿಜಿಎಚ್‌ಎಸ್‌ಗೆ ಒಪ್ಪಿಸಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಜೊತೆಗೆ ಸೂಕ್ತ ತನಿಖೆ ನಡೆಸಿ ಘಟನೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಿದೆ.
ತನಿಖೆ ನಡೆಸಲು ಆರು ವಾರಗಳ ಅಗತ್ಯವಿದೆ ಎಂಬುದಾಗಿ ಪೊಲೀಸರು ತಿಳಿಸಿದಾಗ ಪೀಠ, “ಜನರಿಗೆ ಬದ್ಧರಾಗಿರುವುದು ನಿಮ್ಮ ಕರ್ತವ್ಯ, ಇದು ನೀವು ಹಿಡಿಯಬೇಕಾದ ಹಾದಿಯಲ್ಲ, ಆರು ವಾರಗಳ ಹೊತ್ತಿಗೆ, ಈ ಸಮಸ್ಯೆ ಇಲ್ಲದಂತಾಗಬೇಕು" ಎಂದು ಖಂಡತುಂಡವಾಗಿ ಹೇಳಿತು.