Doctor Arrested for fake vaccination - ವೈದ್ಯೆಯ ಕಳ್ಳ ದಂಧೆ- ಪ್ರತಿನಿತ್ಯ 80 ಮಂದಿಗೆ ಅಕ್ರಮ ಲಸಿಕೆ ನೀಡಿದ ಡಾಕ್ಟರ್
ದೇಶಾದ್ಯಂತ ಹಲವಾರು ಮಂದಿ ಲಸಿಕೆಗಾಗಿ ಸರತಿಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ದಿನಗಟ್ಟಲೆ ಸಾಲುಗಟ್ಟಿ ಲಸಿಕೆಗೆ ಅಲೆದರೂ ಮೂರು ದಿನ ಬಿಟ್ಟು ಬನ್ನಿ, ಸೋಮವಾರ ನಂತರ ಬನ್ನಿ ಅಂತ ಹೇಳುತ್ತಾರೆ.
ಆದರೆ, ಬೆಂಗಳೂರಿನ ವೈದ್ಯೆಯೊಬ್ಬಳು ಕಳ್ಳ ಮಾರ್ಗದಲ್ಲಿ ಲಸಿಕೆ ನೀಡಿದ್ದಾರೆ. ಆಕೆಯ ಅಕ್ರಮ ದಂಧೆ ಬಗ್ಗೆ ಭಯಾನಕ ಸತ್ಯ ಇದೀಗ ಹೊರ ಬಿದ್ದಿದೆ.
ಈ ಕಳ್ಳ ದಂಧೆಯಲ್ಲಿ ಭಾಗಿಯಾಗಿದ್ದ ಡಾ. ಪುಷ್ಪಿತಾ (25), ಮತ್ತು ಸಿಬ್ಬಂದಿ ಪ್ರೇಮಾ (34) ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ಧಾರೆ.
ಡಾ. ಪುಷ್ಪಿತಾ ಮಂಜುನಾಥ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಅವರು ಅನ್ನಪೂರ್ಣೇಶ್ವರಿ ನಗರದಲ್ಲಿ ಇರುವ ತನ್ನ ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದಳು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆಯನ್ನು ಸದ್ದಿಲ್ಲದೆ ಆರಂಭಿಸಿಬಿಟ್ಟಿದ್ದಳು.
ಈಕೆ ಕಳೆದ ಎಪ್ರಿಲ್ 23ರಿಂದಲೇ ಒಂದು ಲಸಿಕೆಗೆ 500 ರೂಪಾಯಿ ಪಡೆದು ಲಸಿಕೆ ನೀಡುತ್ತಿದ್ದಳು ಎಂಬ ವಿಚಾರವನ್ನು ಆಕೆ ಬಾಯಿ ಬಿಟ್ಟಿದ್ದಾಳೆ. ಖಚಿತ ಮಾಹಿತಿಯನ್ನು ಆಧರಿಸಿ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.
ಅರೋಪಿಗಳಿಂದ ಒಂದು ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಮತ್ತು ಬಳಸಲು ಸಜ್ಜಾದ ಸಿರಿಂಜ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೊದಲೇ ಬುಕ್ಕಿಂಗ್ ಮಾಡಬೇಕು.
ಲಸಿಕೆ ಪಡೆಯುವವರು ಮೊದಲೇ ಬುಕ್ಕಿಂಗ್ ಮಾಡಬೇಕಿತ್ತು. ಶ್ರೀಮಂತರು ಫೋನ್ ಮೂಲಕ ಲಸಿಕೆ ಕಾಯ್ದಿರಿಸುತ್ತಿದ್ದರು. ಅವರ ಹೆಸರನ್ನು ಈ ವೈದ್ಯೆ ತನ್ನ ನೋಟ್ ಬುಕ್‌ನಲ್ಲಿ ಬರೆದಿಟ್ಟುಕೊಳ್ಳುತ್ತಿದ್ದಳು.
ಬಳಿಕ ವ್ಯಾಕ್ಸಿನ್‌ಗಾಗಿ ಸಾಲು ನಿಂತವರದಲ್ಲಿ ಇವರ ಹೆಸರು ಕೇಳಿ ನೋಟಿ ಬುಕ್‌ನಲ್ಲಿ ರಿಜಿಸ್ಟರ್ ಆಗಿದ್ದರೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಹೀಗಾಗಿ ಒಂದು ವಾರ ಮುಂಚೆಯೇ ಲಸಿಕೆ ಮುಂಗಡ ಬುಕ್ಕಿಂಗ್ ಮಾಡಬೇಕಿತ್ತು.
ಕದ್ದು ಮುಚ್ಚಿ ಲಸಿಕೆ ಪಡೆದವರೆಲ್ಲ ಶ್ರೀಮಂತರೇ ಆಗಿದ್ದರು. ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಹಾಹಾಕಾರ ಇದ್ದಾಗ, ಕಾಳಸಂತೆಯಲ್ಲಿ ಲಸಿಕೆ ಸಿಗುತ್ತಿತ್ತು. ಸುಮಾರು ಒಂದು ವಾರಕ್ಕೆ ಮುಂಚಿತವಾಗಿ ಲಸಿಕೆ ಬುಕ್ಕಿಂಗ್ ಮಾಡಿದವರು ತಂಡವಾಗಿ ಬಂದು ಗುಟ್ಟಾಗಿ ಲಸಿಕೆ ಪಡೆದುಕೊಳ್ಳುತ್ತಿದ್ದರು.
ಡಾಕ್ಟರ್ ಕಳ್ಳಾಟ ಬಯಲು
ಅಕ್ರಮ ದಂಧೆಯಲ್ಲಿ ಭಾಗಿಯಾಗಿದ್ದ ಈ ವೈದ್ಯೆ, ಹೆಸರು, ಆಧಾರ್ ನಂಬರ್ ಇಟ್ಟುಕೊಂಡು ಹೋಗಿ ಮನೆಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದರು. ಇದಾದ ಮರುದಿನ, ಆಸ್ಪತ್ರೆಗೆ ಹೋಗಿ ಆಕೆ ಗುಟ್ಟಾಗಿ ಕೋವಿನ್ ಆಪ್‌ನಲ್ಲಿ ಈ ಲಸಿಕೆ ನೀಡಿದ ದಾಖಲೆಯನ್ನು ಎಂಟ್ರಿ ಮಾಡುತ್ತಿದ್ದಳು.
ಕೋವಿನ್ ಆಪ್‌ನಲ್ಲಿ ಸಹ ವಯಸ್ಸಿನ ಲೆಕ್ಕ ತಪ್ಪಾಗಿ ಹಾಕಿದ್ದಳು. 23 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಿದರೂ ಅವರ ವಯಸ್ಸನ್ನು ತಪ್ಪಾಗಿ ನಮೂದಿಸಲಾಗುತ್ತಿತ್ತು. ಈ ಕಳ್ಳಾಟ ಹಲವು ದಿನಗಳ ವರೆಗೆ ಮುಂದುವರಿದಿತ್ತು.
ಕಳ್ಳಾಟ ಬಯಲಾದದ್ದು ಹೇಗೆ...?
ಅನ್ನಪೂರ್ಣೇಶ್ವರಿ ನಗರ ಇನ್ಸ್‌ಪೆಕ್ಟರ್ ಲೋಹಿತ್ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಐಟಿಐ ಲೇ ಔಟ್‌ನ ಮನೆಯೊಂದರಲ್ಲಿ ವ್ಯಾಕ್ಸಿನ್ ಹಾಕುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಮನೆಯೊಂದರಿಂದ ಲಸಿಕೆ ಹಾಕಿಸಿಕೊಂಡು ಜನ ಎಡಗೈ ತೋಳು ಹಿಡಿದುಕೊಂಡು ಬರುತ್ತಿದ್ದಾರೆ ಎಂಬ ದೂರು ನೆರೆ ಮನೆಯವರಿಂದ ಬಂದಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು ಮಾರು ವೇಷದಲ್ಲಿ ಹೋಗಿದ್ದರು. ಅಲ್ಲಿ ಆಕೆಯನ್ನು ಟ್ರಾಪ್ ಮಾಡಲಾಗಿದೆ.
ಡಾ. ಪುಷ್ಪಿತಾ ಸ್ನೇಹಿತರೂ ಇದೇ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಅನುಮಾ ವ್ಯಕ್ತಪಡಿಸಿದ್ದು, ಇನ್ನುಳಿದ ವೈದ್ಯರೂ ಇದೇ ಹಾದಿಯಲ್ಲಿ ದಂಧೆ ನಡೆಸುತ್ತಿರಬಹುದು ಎನ್ನಲಾಗಿದೆ.
ಲಸಿಕೆಯನ್ನು ಸರಿಯಾಗಿ ಫ್ರೀಜ್ ಮಾಡುತ್ತಿರಲಿಲ್ಲ. ಖುದ್ದು ತಂದೆ ತಾವೇ ವ್ಯಾಕ್ಸಿನೇಷನ್ ಮಾಡುತ್ತಿದ್ದರು. ಆದರೆ, ಈ ವ್ಯಾಕ್ಸಿನೇಷನ್ ಪರಿಣಾಮಕಾರಿಯಾಗುತ್ತಿರಲಿಲ್ಲ.
ವೈದ್ಯರು ಬಂಧನ ಆದ ಬಳಿಕ ಬಿಬಿಎಂಪಿ ವೈದ್ಯರು ಪರಿಶೀಲನೆ ನಡೆಸಿದ್ದು, ವೈದ್ಯಕೀಯ ನಿಯಮಾವಳಿಗಳನ್ನು ಅನುಸರಿಸದೆ ವ್ಯಾಕ್ಸಿನೇಷನ್ ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ.
ಅಲ್ಲದೆ, ಸಿರಿಂಜ್ ಕೂಡ ಬೇರೆಯದು ಬಳಸಲಾಗಿದೆ ಎಂದು ಬಿಬಿಎಂಪಿ ವೈದ್ಯರು ಕಳವಳ ವ್ಯಕ್ತಪಡಿಸಿದ್ಧಾರೆ.
ಪ್ರತಿ ದಿನ ಒಬ್ಬರಿಂದ ತಲಾ 500 ರೂ. ಪಡೆದು ವ್ಯಾಕ್ಸಿನ್ ನೀಡುತ್ತಿದ್ದರು. ದಿನಕ್ಕೆ 80ರಷ್ಟು ಮಂದಿಗೆ ಸರಾಸರಿ ಲಸಿಕೆ ನೀಡಲಾಗುತ್ತಿತ್ತು. ಇದನ್ನು ದಂಧೆಯಲ್ಲಿ ಭಾಗಿಯಾಗಿದ್ದವರು ಪಾಲು ಮಾಡಿಕೊಳ್ಳುತ್ತಿದ್ದರು.