Fine to Advocate who filed PIL - ಲಾಕ್ ಡೌನ್ ವೇಳೆ ಲಾಠಿ ಚಾರ್ಜ್ ಆರೋಪ: ಪೊಲೀಸರ ವಿರುದ್ಧ ಎಫ್ಐಆರ್ ಕೋರಿದ್ದ ಪಿಐಎಲ್ ವಜಾ, ವಕೀಲರಿಗೆ ದಂಡ
ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಸರಿಯಲ್ಲ, ಹಾಗಾಗಿ, ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಜಾ ಮಾಡಿದೆ. ಅಲ್ಲದೆ, ಈ ಅರ್ಜಿಯನ್ನು ಹೈಕೋರ್ಟ್ ಮುಂದೆ ಹಾಕಿರುವ ವಕೀಲರಿಗೆ ಒಂದು ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಿತಾಸಕ್ತಿ ದಾವೆ ಅರ್ಜಿಯನ್ನು ವಕೀಲ ಬಾಲಕೃಷ್ಣನ್ ಕರ್ನಾಟಕ ಹೈಕೋರ್ಟ್ ಮುಂದೆ ಅರ್ಜಿ ಹಾಕಿದ್ದರು.
ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೆ ಜನರು ಕೇಳುತ್ತಾರಾ ...? ನಮ್ಮ ಜನರು ಅಷ್ಟು ನಾಗರಿಕರಾಗಿದ್ದಾರೆ ಎಂದು ನೀವು ನಂಬುತ್ತೀರಾ ..? ಕೋವಿಡ್ ಸೋಂಕಿನಿಂದ ಎಷ್ಟು ಪೊಲೀಸರು ಪ್ರಾಣ ತೆತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ ಎಂದು ನ್ಯಾ.ಸತೀಶ್ ಚಂದ್ರ ಶರ್ಮಾ, ನ್ಯಾ.ಎಂ.ನಾಗಪ್ರಸನ್ನ ರಿದ್ದ ಪೀಠ ವಕೀರನ್ನು ಪ್ರಶ್ನೆ ಮಾಡಿದೆ.
ಪೊಲೀಸರು ತಮ್ಮ ಖುಷಿಗಾಗಿ ಲಾಠಿ ಎತ್ತುವುದಿಲ್ಲ.... ಕೆಲವು ಪೊಲೀಸರಿಗೆ ಸರಿಯಾಗಿ ಅನ್ನ- ನೀರು ಸಿಗುತ್ತಿಲ್ಲ .... ಇಡೀ ಪ್ರಪಂಚ ಕೋವಿಡ್ ಸೋಂಕಿನಿಂದ ನರಳುತ್ತಿದೆ ... ಜನ ಮನೆಯಲ್ಲಿ ಇರಲೆಂದು ಪೊಲೀಸರು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೈಕೋರ್ಟ್ ಪ್ರಶಂಸೆ ವ್ಯಕ್ತಪಡಿಸಿದೆ.
ಪೊಲೀಸರಿಗೆ ಜೀವ ಭಯವಿದ್ದರೂ ಕರ್ತವ್ಯ ನಿರ್ವಹಿಸಿದ್ದಾರೆ... ಕರ್ನಾಟಕ ಪೊಲೀಸರು ಶಿಸ್ತುಬದ್ಧ ಅಧಿಕಾರಿಗಳು.... ಒಂದೆರಡು ಕಡೆ ಪೊಲೀಸರು ಚೌಕಟ್ಟು ಮೀರಿರಬಹುದು .... ಅದಕ್ಕಾಗಿ ಎಲ್ಲಾ ಪೊಲೀಸರ ಮೇಲೆ ವಿಚಾರಣೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ವಕೀಲರು ತಮ್ಮ ಅರ್ಜಿಯಲ್ಲಿ ಮಾಡಿರುವ ಆರೋಪಕ್ಕೆ ಪೂರಕವಾಗಿ ಯಾವುದೇ ದಾಖಲೆ ಒದಗಿಸಿಲ್ಲ... ಹಲ್ಲೆ ನಡೆಸಿದರೆ ಖಾಸಗಿ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.
ಅಲ್ಲದೆ, ಹೈಕೋರ್ಟ್ ಸಮಯ ಅನಗತ್ಯ ವ್ಯರ್ಥ ಮಾಡಿರುವ ಹಿನ್ನೆಲೆಯಲ್ಲಿ 1 ಸಾವಿರ ದಂಡ ವಿಧಿಸಿ ಪಿಐಎಲ್ ವಜಾ ಮಾಡಿದೆ.