Hospital lobby in Mangaluru Part 2 - ಕೊರೋನಾ ಚಿಕಿತ್ಸೆ: 50% ಬೆಡ್ ಗಳಲ್ಲಿ ಉಚಿತ ಚಿಕಿತ್ಸೆ ಎಂಬ ಸುಳ್ಳಿನ ಕಂತೆ
- ರೋಗಿಗಳನ್ನು ಸುಲಿಗೆಗೆ ಒಡ್ಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ.
- ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವುದು ಆರೋಗ್ಯದ ದಂಧೆ
ಆಸ್ಪತ್ರೆ ಸೇರುತ್ತಿರುವ ಕೊರೋನ ಸೋಂಕಿತರು, ಅವರ ಕುಟುಂಬ ಅನುಭವಿಸುವ ಸಂಕಷ್ಟಗಳು ಒಂದೆರಡಲ್ಲ. ಆರೋಗ್ಯ ತುರ್ತು ಸ್ಥಿತಿ ಘೋಷಿಸಿ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು ಗುಣಮಟ್ಟದ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕಾಗಿದ್ದ ಸರಕಾರ ಖಾಸಗಿ ಆಸ್ಪತ್ರೆಯ ಲಾಬಿಗಳ ಪರ ನಿಂತು ಸೋಂಕಿತರ ಸುಲಿಗೆಗೆ ಅವಕಾಶ ಮಾಡಿಕೊಟ್ಟಿದೆ. *ಇದರಿಂದ ಆರೋಗ್ಯದ "ವ್ಯಾಪಾರ" ವನ್ನು ದಂಧೆಯಾಗಿಸಿರುವ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ಬಿಲ್ ಮಾಡಿ ಸೋಂಕಿತ ರೋಗಿಗಳ ಕುಟುಂಬಗಳನ್ನು ಬರ್ಬಾದ್ ಮಾಡುತ್ತಿವೆ. ಸರಕಾರದ ನೀತಿಗಳು ಹೇಗಿವೆ, ನಿಯಮಗಳು ಯಾವ ರೀತಿ ಪಾಲನೆಯಾಗುತ್ತಿವೆ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಉದಾಹರಣೆಗೆ ತೆಗೆದು ಕೊಂಡು ಪರಿಶೀಲನೆ ಮಾಡೋಣ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳಿವೆ. ಎರಡನೇ ಅಲೆ ವ್ಯಾಪಕಗೊಳ್ಳುತ್ತಲೇ ಜಿಲ್ಲಾಡಳಿತ ಕೆಲವು ಆರೋಗ್ಯದ ತುರ್ತು ಕ್ರಮಗಳನ್ನು ಘೋಷಿಸಿತು. ಅದರಲ್ಲಿ ಪ್ರಧಾನವಾದದ್ದು "ಖಾಸಗಿ ಆಸ್ಪತ್ರೆಗಳ ಶೇಕಡಾ 50 ರಷ್ಟು ಬೆಡ್ ಗಳು ಸರಕಾರಿ ಕೋಟಾ" ಅಂತ ಆದೇಶಿಸಿದ್ದು ಹಾಗೂ ಒಟ್ಟು ಪ್ರಮುಖ ಎಂಬತ್ತು ಆಸ್ಪತ್ರೆಗಳನ್ನು ಗುರುತು ಮಾಡಿದ್ದು. ಆ ಆಸ್ಪತ್ರೆಗಳಿಗೆ ನೋಡಲ್ ಆಫೀಸರ್, ಆರೋಗ್ಯ ಮಿತ್ರ ಸಿಬ್ಬಂದಿಯನ್ನು ನೇಮಕ ಗೊಳಿಸಿದ್ದು. ಈ ಆದೇಶ ಜನರಿಗೆ ಒಂದಿಷ್ಟು ನೆಮ್ಮದಿ ನೀಡಿದ್ದು ನಿಜ. ಆದರೆ ವಾಸ್ತವ ಬೇರೆಯೇ ಕತೆಯನ್ನು ಹೇಳುತ್ತದೆ.
ಎಂಬತ್ತು ಆಸ್ಪತ್ರೆಗಳ 50 ಶೇಕಡಾ ಬೆಡ್ ಗಳನ್ನು ಸರಕಾರಿ ಕೋಟಾ ಎಂದು ತೀರ್ಮಾನಿಸಿದ ಮೇಲೆ ಸೋಂಕಿತರಿಗೆ ಉಚಿತವಾಗಿ (ಆಸ್ಪತ್ರೆ ಬಿಲ್ ಸರಕಾರ ಪಾವತಿಸುತ್ತದೆ) ಬೆಡ್ ಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ ಮಾಡಬೇಕಿತ್ತು.* ಆದರೆ ಜಿಲ್ಲಾಡಳಿತ ಅಂತಹ ಕ್ರಮಗಳಿಗೆ ಮುಂದಾಗಲಿಲ್ಲ.
ಬದಲಿಗೆ "ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಐಸಿಯು, ವೆಂಟಿಲೇಟರ್ ಪೇಷಂಟ್ ಗಳು ತಮ್ಮ ಆಧಾರ್ ಕಾರ್ಡ್ ತೋರಿಸಿ 'ಸರಕಾರಿ ಕೋಟಾ' ಕೇಳಿದರೆ ಸಾಕು, ಆಯುಷ್ಮಾನ್ ಅಡಿ ಉಚಿತ ಚಿಕಿತ್ಸೆ ದೊರಕುತ್ತದೆ. ಅದಕ್ಕಾಗಿ ಅಲ್ಲಿರುವ ಆರೋಗ್ಯ ಮಿತ್ರ ಸಿಬ್ಬಂದಿ ಮಾರ್ಗದರ್ಶನ ಮಾಡುತ್ತಾರೆ" ಎಂದು ಪ್ರಕಟನೆ ಹೊರಡಿಸಿ ಸುಮ್ಮನಾಯಿತು. *ಇದರಿಂದ ಐಸಿಯು ಅವಶ್ಯಕತೆ ಇಲ್ಲದ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬೆಡ್ ಗೆ ಪ್ರತಿದಿನ ಹತ್ತರದಿಂದ ಹದಿನೈದು ಸಾವಿರ ರೂಪಾಯಿ ದುಬಾರಿ ದರ ಪಾವತಿಸುವ ಸ್ಥಿತಿ ನಿರ್ಮಾಣಗೊಂಡಿತು.
ಜಿಲ್ಲಾಡಳಿತದ "50 ಶೇಕಡಾ ಬೆಡ್ ಗಳು ಸರಕಾರಿ ಕೋಟಾ" ಎಂಬುದು ಎಷ್ಟು ಸುಳ್ಳು* ಎಂಬುದಕ್ಕೆ ಆಧಾರ ಇಲ್ಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಕೋಟಾದ ಐವತ್ತು ಶೇಕಡಾ ಉಚಿತ ಬೆಡ್ ಗಳು ಅಂದ ಮೇಲೆ ಅವುಗಳ ಪಾರದರ್ಶಕ ಹಂಚಿಕೆಗೆ ವಾರ್ ರೂಂ, ಕೇಂದ್ರೀಕೃತ ವ್ಯವಸ್ಥೆ ಜಿಲ್ಲಾಡಳಿತದ ಕಡೆಯಿಂದ ಆಗಬೇಕಿತ್ತು.
ಆದರೆ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳ ಲಾಬಿಗಳಿಗೆ ಭಯ ಬಿದ್ದು ಅಂತಹ ಕ್ರಮಗಳಿಗೆ ಮುಂದಾಗಲಿಲ್ಲ* ಬದಲಿಗೆ ಆಯುಷ್ಮಾನ್ ನ ಹಳೆಯ ನಿಯಮವನ್ನು ಬಳಸಿಕೊಂಡು *"ಸರಕಾರಿ ವೆನ್ ಲಾಕ್ ಆಸ್ಪತ್ರೆಗಳ ಐಸಿಯ ವಿಭಾಗ, ವೆಂಟಿಲೇಟರ್ ಗಳು ಭರ್ತಿ ಆಗಿರುವುದರಿಂದ ಐಸಿಯು, ವೆಂಟಿಲೇಟರ್ ವಿಭಾಗಗಳಿಗೆ ದಾಖಲಾಗುವ ಸೋಂಕಿತರು ದಾಖಲಾಗುವ ಸಂದರ್ಭ ಆಯುಷ್ಮಾನ್ ಗೆ ವಿನಂತಿಸಿದರೆ ಅವರ ಆಧಾರ್ ಕಾರ್ಡ್ ಗುರುತು ಪಡೆದು ಕೊಂಡು ಆಯುಷ್ಮಾನ್ ಯೋಜನೆ ಅಡಿ ಉಚಿತ ಚಿಕಿತ್ಸೆ ನೀಡಬೇಕು*" ಎಂಬ ನಾಜೂಕಿನ ನಿಯಮ ಜಾರಿಗೆ ತರಲಾಯಿತು.
ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಸಾಮಾನ್ಯ ಬೆಡ್ ಗಳು ಖಾಲಿ ಇರುವುದರಿಂದ ಐಸಿಯು, ವೆಂಟಿಲೇಟರ್ ಅಗತ್ಯ ಇಲ್ಲದ ಸೋಂಕಿತರು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಅಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ತಮ್ಮಲ್ಲೇ ಬೆಡ್ ಗಳು ಖಾಲಿ ಇರುವುದರಿಂದ ಆಯುಷ್ಮಾನ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಲೆಟರ್ ನೀಡಲು ಸರಕಾರಿ ಆಸ್ಪತ್ರೆಗಳಿಗೆ ಸಾಧ್ಯವಿಲ್ಲ *ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ದಿನಕ್ಕೆ ಕನಿಷ್ಟ (ಇದು ಸರಕಾರವೇ ನಿಗದಿ ಪಡಿಸಿದ ದರ ಪಟ್ಟಿ) ಹತ್ತು ಸಾವಿರ ರೂಪಾಯಿಯಿಂದ ಹದಿನೈದು ಸಾವಿರ ರೂಪಾಯಿವರಗೆ ದುಬಾರಿ ದರ ಬೆಡ್ ಗಾಗಿ ಪಾವತಿಸಬೇಕಾಗುತ್ತದೆ. ಇದು ಹತ್ತು ದಿನದ ಚಿಕಿತ್ಸೆ ಅಂದರೆ ಕನಿಷ್ಟ ಒಂದೂವರೆ ಲಕ್ಷ ರೂಪಾಯಿ ಆಗುತ್ತದೆ. ಔಷಧಿ, ವೈದ್ಯರ, ವಿವಿಧ ಚಿತ್ರ ವಿಚಿತ್ರ ಪರೀಕ್ಷೆಗಳ ವೆಚ್ಚ ಇದರ ಮೂರು ಪಟ್ಟು.*
ಹಾಗಿದ್ದ ಮೇಲೆ ಜಿಲ್ಲಾಡಳಿತ "ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ಐವತ್ತು ಬೆಡ್ ಗಳು ಉಚಿತ ಚಿಕಿತ್ಸೆಯ ಸರಕಾರಿ ಕೋಟಾ" ಎಂದು ಆದೇಶಿಸಿರುವುದು ಬೋಗಸ್ ಅಲ್ಲವೆ ? *ನಮ್ಮ ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರುಗಳು ಖಾಸಗಿ ಆಸ್ಪತ್ರೆಗಳ ಪಿ ಆರ್ ಓ ಗಳೆ ಹೊರತು ಜನಪ್ರತಿನಿಧಿಗಳು ಅಲ್ಲ ಎಂದು ಅರ್ಥವಲ್ಲವೆ ?* ನಾವು ಕೇವಲ ಅಧಿಕಾರಿಗಳನ್ನು ದೂರಿದರೆ ಸಾಕೆ ?
*ವಿಷಯ ಇಷ್ಟಕ್ಕೆ ಮುಗಿಯಲಿಲ್ಲ,* ಸರಕಾರ ಆಯುಷ್ಮಾನ್ ಅಡಿ ಉಚಿತ ಚಿಕಿತ್ಸೆಗೆ ಏರ್ಪಾಡು ಮಾಡಿರುವ ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ವಾರ್ಡ್ ಗಳ ಹಂಚಿಕೆ ನ್ಯಾಯಯುತವಾಗಿ ನಡೆಯುತ್ತಿದೆಯೆ ? ಆಯುಷ್ಮಾನ್ ನಿಯಮಗಳು ಪಾಲನೆ ಆಗುತ್ತಿದೆಯೆ ?
ಖಂಡಿತಾ ಇಲ್ಲ. ಬಹುತೇಕ ಖಾಸಗಿ ಆಸ್ಪತ್ರೆಗಳು ಐಸಿಯು, ವೆಂಟಿಲೇಟರ್ ಅಗತ್ಯ ಇರುವ ಸೋಂಕಿತರು ಆಸ್ಪತ್ರೆಗೆ ಆಗಮಿಸುವಾಗಲೇ " *ನಮ್ಮಲ್ಲಿ ಆಯುಷ್ಮಾನ್, ಸರಕಾರಿ ಖೋಟಾ ಸಹಿತ ಯಾವುದೇ ಉಚಿತ ಬೆಡ್ ಗಳು ಲಭ್ಯ ಇಲ್ಲ, ನಾವು ನಿಗದಿ ಪಡಿಸಿದ ದರ ಪಾವತಿಸುವುದಾದರೆ ಮಾತ್ರ ದಾಖಲಿಸುತ್ತೇವೆ" ಎಂದು ಶರತ್ತು ವಿಧಿಸುತ್ತಾರೆ* ಒಮ್ಮೆ ದಾಖಲಾದಮೇಲೆ ಸರಕಾರಿ ಖೋಟಾ ಆಗಿರಲಿ, ಖಾಸಗಿ ಆಸ್ಪತ್ರೆಯ ಖೋಟಾ ಆಗಿರಲಿ *ದಿನಕ್ಕೆ ಹತ್ತಾರು ಸಾವಿರ ರೂಪಾಯಿಗಳ ಔಷಧಿಯನ್ನು ತಮ್ಮದೇ ಮೆಡಿಕಲ್ ನಲ್ಲಿ ನಗದು ಪಾವತಿಸಿ ಖರೀದಿಸುವಂತೆ ಮಾಡುತ್ತಾರೆ (ಇದು ರೋಗಿಗಳಿಗೆ ಬಳಕೆಯಾಗುವುದು ಕಂಡವರಿಲ್ಲ)
ಇನ್ನೂ ಕೆಲವು ಬುದ್ದಿವಂತರು "ತಮ್ಮಲ್ಲಿ ಸರಕಾರಿ ಕೋಟಾದ ಐಸಿಯು, ವೆಂಟಿಲೇಟರ್ ಗಳು ಭರ್ತಿ ಆಗಿವೆ" ಎಂದು ಜಿಲ್ಲಾಡಳಿತದ, ಸೋಂಕಿತರ ಕಣ್ಣಿಗೆ ಏಕಕಾಲಕ್ಕೆ ಮಣ್ಣೆರಚುತ್ತಾರೆ. ಇನ್ನೂ ಕೆಲವು ಖಾಸಗಿ ಜಾಣರು, *"ಸರಕಾರಿ ಖೋಟಾದಲ್ಲಿ ದಾಖಲಿಸುತ್ತೇವೆ, ಪರೀಕ್ಷಿಸಿದ ವೈದ್ಯರ, ವಿವಿಧ ಪರೀಕ್ಷೆಗಳ, ಔಷಧಿಯ ವೆಚ್ಚ ಮಾತ್ರ ಸೋಂಕಿತರ ಕಡೆಯವರೇ ಪಾವತಿಸಬೇಕು"* ಅಂತ ಕಂಡೀಷನ್ ಹಾಕಿ, ಅದರದೊಂದು ಲಕ್ಷಗಟ್ಟಲೆ ಬಿಲ್ ಮಾಡಿ ಸರಕಾರ ಹಾಗೂ ರೋಗಿಗಳು ಹೀಗೆ ಎರಡೂ ಕಡೆಯಿಂದ ಏಕಕಾಲದಲ್ಲಿ ದುಡ್ಡು ಹೊಡೆಯುತ್ತಾರೆ..!
"ಇಷ್ಟೆಲ್ಲಾ ನಡೆಯುತ್ತಿರುವಾಗ ಜಿಲ್ಲಾಡಳಿತ ನೇಮಿಸಿರುವ ನೋಡಲ್ ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ" ಅಂತ ಕೇಳುತ್ತೀರಾ ? ಸಿಂಪಲ್, ಅವರು ನಿದ್ದೆ ಮಾಡುತ್ತಿರುತ್ತಾರೆ. ಅಂದರೆ, ಖಾಸಗಿ ಆಸ್ಪತ್ರೆಗಳವರ ಜೊತೆ ಸೇರಿರುತ್ತಾರೆ. ಆರೋಗ್ಯ ಮಿತ್ರ ಸಿಬ್ಬಂದಿಗಳಂತೂ ಖಾಸಗಿ ಆಸ್ಪತ್ರೆಯ ನೌಕರರು ಅನ್ನುವಂತೆಯೇ ವರ್ತಿಸುತ್ತಾರೆ, ಅವರನ್ನು ಅಲ್ಲಿ "ಆರೋಗ್ಯ ಮಿತ್ರ ಸಿಬ್ಬಂದಿ ಎಂದು ಗುರತು ಹಿಡಿಯುವುದು ಅಸಾಧ್ಯ," ಎಂದು ಸೋಂಕಿತರ ಕಡೆಯವರು ದೂರುತ್ತಾರೆ. ಇನ್ನು ಹಿರಿಯ ಅಧಿಕಾರಿಗಳೇ ಆಗಿರುವ ನೋಡಲ್ ಆಫೀಸರುಗಳು ಅತ್ತ ಸುಳಿಯುವುದೇ ಇಲ್ಲ, ಅವರು ಫೋನ್ ಎತ್ತಿದರೆ ಪುಣ್ಯ ಎಂಬ ಸ್ಥಿತಿ ಇದೆ.
ಇಷ್ಟೆಲ್ಲಾ ಅಧ್ವಾನಗಳು ತುಂಬಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಚಿಕಿತ್ಸಾ ನಿಯಮಗಳಿಂದ ಆಸ್ಪತ್ರೆ ಸೇರುವ ಬಹುತೇಕ ಸೋಂಕಿತರ ಕುಟುಂಬಗಳು ಬರ್ಬಾದ್ ಆಗುವ ಸ್ಥಿತಿ ತಲುಪಿವೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಅಸುನೀಗುವ ಸೋಂಕಿತರ ಸ್ಥಿತಿ ಇನ್ನಷ್ಟು ಅಧ್ವಾನ. *ಒಂದೆಡೆ ಕುಟುಂಬ ಸದಸ್ಯರ ಸಾವು, ಮತ್ತೊಂದೆಡೆ ಭರಿಸಲಾಗದಷ್ಟು ಅಗಾಧ ಮೊತ್ತದ ಬಿಲ್ಲು. ಕರುಣೆ ಇಲ್ಲದೆ ವಸೂಲಿಗೆ ನಿಲ್ಲುವ ಖಾಸಗಿ ಆಸ್ಪತ್ರೆಗಳು. ಬದುಕಿರುವ ಕುಟುಂಬ ಸದಸ್ಯರೂ ಸಾಯುವ ಸ್ಥಿತಿ. ಇನ್ನು ಕೆಲವು ಕುಟುಂಬಗಳ ಎರಡು, ಮೂರು, ನಾಲ್ಕು ಸದಸ್ಯರು ಏಕಕಾಲಕ್ಕೆ ಆಸ್ಪತ್ರೆ ಸೇರಿರುವ ದಾರುಣ ಕತೆಗಳೂ ಇವೆ. ಆ ಕುಟುಂಬಗಳ ದುಸ್ಥಿತಿ ಊಹಿಸಿ* ಕೊರೋನ ಕಾಲ ಮುಗಿದ ಮೇಲೆ ಈ ಎಲ್ಲಾ ಕುಟುಂಬಗಳ ಕುರಿತು ಅಧ್ಯಯನ ನಡೆದರೆ, ಮನೆ ಮಠ ಮಾರಿರುವ, ಬಡ್ಡಿಗೆ ದುಡ್ಡು ತಂದವರ, ಕೊನೆಗೆ ಭಿಕ್ಷುಕರಾದವರ, ಊರು ಬಿಟ್ಟವರ ಎಷ್ಟೊಂದು ಕತೆಗಳು ಸಿಕ್ಕೀತು.
ಹೀಗಿರುತ್ತಾ ಖಾಸಗಿ ಆಸ್ಪತ್ರೆಗಳ ಐಸಿಯು ಅಲ್ಲದ ಒಂದೇ ಒಂದ ಬೆಡ್ ಕೋವಿಡ್ ಸೋಂಕಿತರಿಗೆ ಸರಕಾರಿ ಕೋಟಾದಲ್ಲಿ ದೊರಕಿಲ್ಲ ಅಂದ ಮೇಲೆ ಖಾಸಗಿ ಆಸ್ಪತ್ರೆಗಳ ಶೇಕಡಾ ಐವತ್ತು ಹಾಸಿಗೆಗಳು ಸರಕಾರಿ ಕೋಟಾ, ಉಚಿತ ಚಿಕಿತ್ಸೆ ಎಂಬ ಆದೇಶ ಯಾಕೆ ಬೇಕಿತ್ತು ಎಂದು ಕೇಳುತ್ತೀರಾ ? ಕೇಳ ಬೇಕಾದದ್ದೆ. ಜನರ ಕಣ್ಣಿಗೆ ಮಣ್ಣೆರಚುವ ಇಂತಹ ನಾಟಕಗಳನ್ನು ನೀವು ಪ್ರಶ್ನಿಸಬೇಕಿರುವುದು ಮಾತ್ರ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರನ್ನು.