Advocates condemned CT Ravi & DVS Gowda statement- ನ್ಯಾಯಾಂಗ ಕುರಿತ ಸಿ.ಟಿ. ರವಿ, ಡಿ.ವಿ. ಸದಾನಂದ ಗೌಡರ ಹೇಳಿಕೆಗೆ ವಕೀಲರ ಸಂಘ ತೀವ್ರ ಆಕ್ರೋಶ
ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿಕೆಗೆ ವಕೀಲರ ಸಂಘದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ, ಲಸಿಕೆ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ ಎಂಬ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆಯನ್ನೂ ವಕೀಲರು ತೀಕ್ಷ್ಣವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಉಭಯ ನಾಯಕರ ಬೇಜವಾಬ್ದಾರಿ ಹೇಳಿಕೆಯನ್ನು ವಕೀಲರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕೋವಿಡ್ ಎರಡನೇ ಅಲೆ ದೇಶವನ್ನೇ ಕಂಗೆಡಿಸಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಂಕು ತಡೆಗೆ ಯಾವೆಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನು ಕೈಗೊಂಡಿಲ್ಲ. ಅಲ್ಲದೆ, ಸಿದ್ದತೆ, ಔಷಧಿಯ ಸಮರ್ಪಕ ಹಂಚಿಕೆಗೆ ಬೇಕಾದ ವ್ಯವಸ್ಥೆ ಮಾಡಬೇಕಾದ ಒಂದು ವರ್ಷದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಿದೆ. ಸಾರ್ವಜನಿಕ ವಲಯದ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗದ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರದ ಮೇಲೆ ಮಹತ್ವದ ಹೊಣೆಗಾರಿಕೆ ಇದೆ. ಈ ಸರ್ಕಾರಗಳು ಇದನ್ನು ನಿಭಾಯಿಸಿಲ್ಲ ಎಂದು ವಕೀಲರ ಸಂಘ ಅಭಿಪ್ರಾಯಪಟ್ಟಿದೆ.
ತನ್ನ ಪಾಲಿನ ಶಾಸನ ಬದ್ಧ ಕೆಲಸವನ್ನು ಅರಿಯದೆ, ಮೈಮರೆತ ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶಗಳು ಮುಜುಗರ ತಂದಿವೆ ಮತ್ತು ಇದು ಸ್ಪಷ್ಟವಾಗಿದೆ ಎಂದು ಅದು ಹೇಳಿದೆ.
ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮೀಸಲಾದ ಉನ್ನತ ನ್ಯಾಯಾಲಯಗಳು ಸಂವಿಧಾನದ ಅನುಚ್ಛೇದ 21ರಲ್ಲಿ ಮಾನ್ಯ ಮಾಡಿರುವ ನಾಗರಿಕರ ಬದುಕುವ ಹಕ್ಕನ್ನು ಎತ್ತಿ ಹಿಡಿಯುವಲ್ಲಿ ಸರಿಯಾದ ಹೆಜ್ಜೆಯನ್ನೇ ಇರಿಸಿದೆ ಎಂದು ವಕೀಲರ ಸಂಘ ನ್ಯಾಯಾಲಯಗಳ ತೀರ್ಪನ್ನು ಸ್ವಾಗತಿಸಿದೆ.
ಇದನ್ನು ಸರಿಯಾಗಿ ಗ್ರಹಿಸದೆ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ಗುರಿಯಾಗಿರಿಸಿಕೊಂಡು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಮಾಜಿ ಸಚಿವ ಸಿ.ಟಿ. ರವಿ ಅವರು ನೀಡಿರುವ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಹೇಳಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ರಾಜಕೀಯ ನಾಯಕರು ತಮ್ಮ ಮಾತಿನ ಮೇಲೆ ನಿಯಂತ್ರಣ ಇಟ್ಟಿರಬೇಕು. ಇಂತಹ ಕೀಳು ಮಟ್ಟದ ಮಾತುಗಳು ಕೆಟ್ಟ ಪರಂಪರೆಯನ್ನು ಬೆಳೆಸುತ್ತವೆ ಎಂದು ರಂಗನಾಥ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಉಭಯ ನಾಯಕರ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ವಕೀಲರೊಬ್ಬರು ನ್ಯಾಯಾಂಗದ ಮೆಟ್ಟಿಲು ಪ್ರವೇಶಿಸಿದ್ಧಾರೆ.
ಸುಪ್ರೀಂ ಕೋರ್ಟ್ ಆದೇಶಗಳ ಕುರಿತು ಬಿಜೆಪಿ ನಾಯಕ ಸಿ.ಟಿ. ರವಿ ಟೀಕಿಸುವ ಜೊತೆಗೆ ನ್ಯಾಯಾಂಗದ ಕಾರ್ಯದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ. ಜೊತೆಗಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಸ್ವತಃ ವಕೀಲರು. ಆದ್ದರಿಂದ ಈ ಇಬ್ಬರು ರಾಜಕೀಯ ನಾಯಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅವರಿಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದಾರೆ.
ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಲಿಖಿತ ಪತ್ರ ಬರೆಯಲಾಗಿದೆ. ಪತ್ರದೊಂದಿಗೆ ವೀಡಿಯೋ ಕ್ಲಿಪ್ಪಿಂಗ್ ನ್ನೂ ದಾಖಲೆಯಾಗಿ ಲಗತ್ತಿಸಲಾಗಿದೆ.