Mother with her baby died due to electric Shock- ವಿದ್ಯುತ್ ತಗುಲಿ ಹಸುಳೆ ಜೊತೆ ತಾಯಿ ಸಾವು: ಬೆಳ್ತಂಗಡಿಯಲ್ಲಿ ನಡೆಯಿತು ದಾರುಣ ಘಟನೆ
ಬೆಳ್ತಂಗಡಿ: ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದ ತಾಯಿ ಹಾಗೂ ಮಗು ಇಬ್ಬರೂ ಆಕಸ್ಮಿವಾಗಿ ವಿದ್ಯುತ್ ಆಘಾತಕ್ಕೊಳಗಾಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪೆಟ್ರಮೆ ಗ್ರಾಮದ ಬೋಳೋಡಿ ಕಜೆ ಎಂಬಲ್ಲಿ ನಡೆದಿದೆ.
ಪೆಟ್ರಮೆ ಗ್ರಾಮದ ಕೋಡಂದೂರು ಮನೆಯ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷ ವಯಸ್ಸಿನ ಗೀತಾ ಹಾಗೂ ಅವರ ಪುತ್ರ ನಾಲ್ಕು ವರ್ಷ ಪ್ರಾಯದ ಭವಿಷ್ ಮೃತಪಟ್ಟವರಾಗಿದ್ದಾರೆ.
ಗೀತಾ ಅವರು ತಮ್ಮ ಮಗನನ್ನು ಎತ್ತಿಕೊಂಡು ಪಂಪ್ ಸ್ವಿಚ್ ಹಾಕಲು ಮುಂದಾದ ವೇಳೆ ವಿದ್ಯುತ್ ಆಘಾತವಾಗಿದೆ.
ಹರೀಶ್ ಗೌಡ ಅವರು ಹೊಸದಾಗಿ ಈ ಸ್ಥಳವನ್ನು ಇತ್ತೀಚೆಗಷ್ಟೇ ಖರೀದಿಸಿದ್ದರು. ಇಂದು ಬೆಳಗ್ಗೆ ಹರೀಶ್ ಅವರ ತಾಯಿ, ಗೀತಾ ಜೊತೆಗೆ ಈ ಜಮೀನಿಗೆ ಬಂದಿದ್ದರು. ಆದರೆ, ಇದೇ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಘಟನೆಯ ವೇಳೆ ಹರೀಶ್ ಅವರು ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ವಿದ್ಯುತ್ ಆಘಾತದಿಂದಾಗಿ ತಾಯಿ ಹಾಗೂ ಮಗು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.