MRPL employment for locals- ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ: ಜನಪ್ರತಿನಿಧಿಗಳ ಸುಳ್ಳು- ಮುನೀರ್ ಮತ್ತೆ ವಾಗ್ದಾಳಿ
mrpl ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗಿರುವ ಅನ್ಯಾಯಗಳ ಕುರಿತು ಮಾತಾಡಲು, ಮನವಿ ಸಲ್ಲಿಸಲು "ಸ್ಥಳೀಯರ ಉದ್ಯೋಗದ ಹಕ್ಕಿಗಾಗಿ" ಧ್ವನಿ ಎಬ್ಬಿಸಿರುವ ತುಳುನಾಡಿನ ಸಮಾನ ಮನಸ್ಕರು ಬಯಸಿದ್ದೆವು. ಅದಕ್ಕಾಗಿ ಕಂಪೆನಿಯ ಮುಖ್ಯಸ್ಥರಾಗಿರುವ, ವ್ಯವಸ್ಥಾಪಕ ನಿರ್ದೇಶಕ( M D)ರ ಜೊತೆ ಮಾತನಾಡಿ ಸಮಯ ನಿಗದಿಗೊಳಿಸಿದ್ದೆವು. ಆದರೆ mrpl ಆಡಳಿತ ಕುಂಟು ನೆಪಗಳನ್ನು ಮುಂದಿಟ್ಟು ಕೊನೆಯ ಕ್ಷಣದಲ್ಲಿ ನಿಗದಿಯಾಗಿದ್ದ ಭೇಟಿಯನ್ನು ತಪ್ಪಿಸಿದೆ . ಎರಡು ದಿನಗಳಲ್ಲಿ ಎರಡು ಬಾರಿ ಇದು ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ವಿಷಾದ ವ್ಯಕ್ತಪಡಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲರು ಕಂಪೆನಿಯ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ "ನೇಮಕಾತಿಗೆ ತಡೆ ಹೇರಲಾಗಿದೆ" ಎಂದು ತಿಳಿಸಿ ಇಂದಿಗೆ ಐದು ದಿನ ಸಂದಿದೆ. ಆದರೆ ನೇಮಕಾತಿಯ ಕೊನೆಯ ಹಂತದ ಕೆಲಸಗಳು ಅಭಾದಿತವಾಗಿ ಮುಂದುವರಿದಿದೆ. ಬಿಜೆಪಿ ಸಂಸದರು, ಶಾಸಕರ ಮಾತುಗಳು ಅಪ್ಪಟ ಸುಳ್ಳು ಎಂದು ಸಾಬೀತಾಗಿದೆ ಎಂದು ಅವರು ವಾದಿಸಿದ್ದಾರೆ.
ಈ ಕುರಿತು ತುಳುನಾಡಿನ, ಕನ್ನಡಿಗರ ಹೋರಾಟ ಸ್ಪಷ್ಟವಾದ ರಾಜಕೀಯ ಕಣ್ಣೋಟದೊಂದಿಗೆ ಮುನ್ನಡೆಯಬೇಕಿದೆ. ಇಲ್ಲದಿದ್ದಲ್ಲಿ ಈ ಅನ್ಯಾಯ ಅಭಾದಿತವಾಗಿ ಮುಂದುವರೆಯಲಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.