MRPL Recruitment- ಸುಳ್ಳಿನ ಗೋಪುರದಿಂದ ಉದ್ಯೋಗ ವಂಚನೆ ಮರೆಮಾಚುವ ಯತ್ನ ಬೇಡ : ಡಿವೈಎಫ್ಐ
ಎಮ್ ಆರ್ ಪಿ ಎಲ್ ನಲ್ಲಿ ನಡೆದಿರುವ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಅನುಮಾನಗಳಿಗೆ ಕಂಪೆನಿಯಲ್ಲಿರುವ ಸೆಂಟ್ರಲ್ ವಿಜಿಲನ್ಸ್ ಕಮಿಟಿಯ ಪ್ರತಿನಿಧಿಯಿಂದ ತನಿಖೆ ನಡೆಸಿದರೆ ಸಾಲದು ಕೇಂದ್ರದ ಸ್ವತಂತ್ರ ತನಿಖಾ ತಂಡಗಳಿಗೆ ತನಿಖೆಯ ಹೊಣೆಯನ್ನು ವಹಿಸಬೇಕು.
ಆಗ ಮಾತ್ರ ನೇಮಕಾತಿಯಲ್ಲಿ ನಡೆದಿರುವ ಅಕ್ರಮ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಬಯಲಿಗೆ ಬರಲು ಸಾಧ್ಯ, ಉದ್ಯೋಗ, ಗುತ್ತಿಗೆ, ಸಿಎಸ್ಆರ್ ಫಂಡ್ ಗಳನ್ನು ಸ್ಥಳೀಯರಿಗೆ ಹಂಚಿರುವ ಕುರಿತು ಸುಳ್ಳಿನ ಗೋಪುರ ಕಟ್ಟುವ ಮೂಲಕ ಕಂಪೆನಿ ಸ್ಥಳೀಯರಿಗೆ ಆಗಿರುವ ಉದ್ಯೋಗ ವಂಚನೆಯನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಂಪೆನಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಸಿವಿಸಿ ಯು, ತನಿಖಾ ನೇಮಕಾತಿಯ ಹಲವಾರು ತಪ್ಪುಗಳತ್ತ ಬೆಳಕು ಚೆಲ್ಲಬಹುದಾದರೂ, ಕಂಪೆನಿಯ ಉನ್ನತ ಅಧಿಕಾರಿಗಳು, ಪ್ರಭಾವಿ ಜನಪ್ರತಿನಿಧಿಗಳು ಉದ್ಯೋಗ ನೇಮಕಾತಿಯಲ್ಲಿನ ವಂಚನೆಯಲ್ಲಿ ಭಾಗಿಯಾಗಿರುವ ಅನುಮಾನ ಇರುವುದರಿಂದ ಆಂತರಿಕ ಸಮಿತಿಯಾಗಿರುವ ವಿಜಿಲನ್ಸ್ ಕಮಿಟಿ ಒತ್ತಡಗಳಿಗೆ ಒಳಗಾಗುವ, ಅದರ ಕೈ ಕಾಲು ಕಟ್ಟಿ ಹಾಕುವ ಸಾಧ್ಯತೆ ಅಧಿಕವಾಗಿದೆ. ಆದುದರಿಂದ ಈ ಪ್ರಕರಣದ ತನಿಖೆಯ ಹೊಣೆಯನ್ನು ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಅಗತ್ಯ ಇದೆ ಎಂದು ಡಿವೈಎಫ್ಐ ಪ್ರತಿಪಾದಿಸುತ್ತದೆ.
ಹಾಗೆಯೆ, ಕಂಪೆನಿ ನೀಡಿರುವ ಮಾಧ್ಯಮ ಹೇಳಿಕೆಯು ಹಲವಾರು ತಪ್ಪು ಮಾಹಿತಿಗಳನ್ನು ಹೊಂದಿದೆ. ಮೂರು ಹಂತಗಳ ವಿಸ್ತರಣೆಯಲ್ಲಿ ಕಂಪೆನಿ ಸೃಷ್ಟಿ ಮಾಡಿರುವ ನೇರ ಉದ್ಯೋಗ ಕೇವಲ 1920 ಮಾತ್ರ. ಅದರಲ್ಲಿ ಕಂಪೆನಿಗಾಗಿ ಜಮೀನು ಕಳೆದು ಕೊಂಡವರು 300 ರಷ್ಟಿದ್ದಾರೆ. ಸಿ ಮತ್ತು ಡಿ ಗ್ರೂಪ್ (ಮಾನೇಜ್ ಮೆಂಟ್ ಹೊರತಾದ) ಗಳಲ್ಲಿ ಒಟ್ಟು ಸಾವಿರದ ನೂರರಷ್ಟು ಉದ್ಯೋಗಿಗಳಿದ್ದು, ಅದರಲ್ಲಿ ಸರಿ ಸುಮಾರು ಮುನ್ನೂರರಷ್ಟು ಹೊರ ರಾಜ್ಯದವರಿದ್ದಾರೆ.
ಜಮೀನು ಕಳೆದುಕೊಂಡ ಕಾರಣಕ್ಕೆ ಉದ್ಯೋಗ ಪಡೆದವರನ್ನು ಹೊರತು ಪಡಿಸಿ ಲೆಕ್ಕ ಹಾಕಿದರೆ ಸ್ಥಳೀಯರ ಸರಾಸರಿ ಅರವತ್ತರಿಂದ ಎಪ್ಪತ್ತು ಶೇಕಡಾದ ಆಸುಪಾಸು ಮಾತ್ರ. ಕಂಪೆನಿ ಹೇಳುವಂತೆ ತೊಂಬತ್ತು ಶೇಕಡಾ ಅಲ್ಲ. ಜಮೀನು ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ ದೊರಕಿರುವುದು ಕಂಪೆನಿಯ ಮುತವರ್ಜಿ, ಸ್ಥಳೀಯರ ಪರ ಧೋರಣೆಯಿಂದ ಅಲ್ಲ. ಅದು ಕಾನೂನಿನ ಅವಕಾಶದಿಂದ ದೊರಕಿರುವ ಹಕ್ಕು. ಅವರನ್ನು ಸ್ಥಳೀಯರ ಆದ್ಯತೆಯ ಲೆಕ್ಕಕ್ಕೆ ಸೇರಿಸಲಾಗದು. ಕಾನೂನು ಇಲ್ಲದಿದ್ದಲ್ಲಿ ಅದೂ ಪರರ ಪಾಲಾಗುತ್ತಿತ್ತು.
ಇನ್ನು ಕಂಪೆನಿಯ ಗುತ್ತಿಗೆದಾರರು, ಪೂರೈಕೆದಾರರು, ಗುತ್ತಿಗೆ ಕಾರ್ಮಿಕರು, ಮಾರಾಟಗಾರರಲ್ಲಿ ಸ್ಥಳೀಯರಿಗೆ ಅವಕಾಶ ಒದಗಿಸಿದ್ದಕ್ಕಿಂತ ಹೊರಗಿನವರಿಗೆ ಮಣೆ ಹಾಕಿದ್ದೇ ಹೆಚ್ಚು. ಗುತ್ತಿಗೆ ನೌಕರರರಾಗಿ ದುಡಿಯುವ ಸ್ಥಳೀಯರು ಈಗಲೂ ಅತೀ ಕಡಿಮೆ ಸಂಬಳ ಪಡೆಯುತ್ತಾರೆ. ನೇರ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರ ಸಂಬಳ, ಸವಲತ್ತುಗಳಲ್ಲಿ ಅಗಾಧ ಪ್ರಮಾಣದ ಅಸಮಾನತೆ ಇರುವುದು ಕಣ್ಣಿಗೆ ರಾಚುವ ಸತ್ಯ. ಮುಂದಿನ ದಿನಗಳಲ್ಲಿ ಯಾಂತ್ರೀಕರಣದ ನೆಪದಲ್ಲಿ ಕಂಪೆನಿಯು ಸ್ಥಳೀಯ ಗುತ್ತಿಗೆ ಕಾರ್ಮಿಕರ ಅವಕಾಶಗಳನ್ನು ಕಡಿಮೆಗೊಳಿಸುವ ಸುದ್ದಿಗಳು ಈಗಾಗಲೆ ಕಂಪೆನಿಯ ಒಳಗಡೆಯಿಂದ ಕೇಳಿಬರುತ್ತಿದೆ.
ಹಾಗೆಯೆ, ಸಾಮಾಜಿಕ ಹೊಣೆಗಾರಿಕೆಯ ನಿಧಿಯೆಂಬುದು ಕಂಪೆನಿಯ ಕರುಣೆ, ಸ್ಥಳೀಯರ ಮೇಲಿನ ಮಮಕಾರಕ್ಕೆ ಸಾಕ್ಷಿ ಆಗುವುದಿಲ್ಲ. ಅದು ಭಾರತ ಸರಕಾರ ರೂಪಿಸಿರುವ ಕಾನೂನಿನ ಭಾಗವಾಗಿ ನಡೆಯುವ ಕಡ್ಡಾಯ ಪ್ರಕ್ರಿಯೆ. ಅದನ್ನು ಖಾಸಗಿ ಸೇರಿದಂತೆ ಯಾವುದೇ ಕಂಪೆನಿಯಾದರೂ ಪಾಲಿಸಲೇಬೇಕು. ಅದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ. ಕಂಪೆನಿಯು ಹೇಳಿಕೊಳ್ಳುವಂತೆ ಈ ನಿಧಿಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡುಗಡೆ ಮಾಡಿರುವ 120 ಕೋಟಿ ರೂಪಾಯಿ ದುರ್ಬಳಕೆಯಾಗಿರುವ, ಪ್ರಭಾವಿಗಳ ಖಾಸಗಿ ಕಾರ್ಯಕ್ರಮಗಳಿಗೆ ಬಳಕೆ ಮಾಡಿರುವ ಆರೋಪ ಸಾರ್ವಜನಿಕ ವಲಯದಲ್ಲಿದೆ. ಕಂಪೆನಿಯ ಮಾರಕ ಮಾಲಿನ್ಯದ ನೇರ ಬಲಿಪಶುಗಳಾದ ಸುತ್ತಲಿನ ಗ್ರಾಮಸ್ಥರಿಗೆ ಈ ನಿಧಿಯನ್ನು ಬಿಡುಗಡೆ ಮಾಡಲು ಕಂಪೆನಿ ಮೀನಾಮೇಷ ಎನಿಸುವುದು, ತಾರತಮ್ಯ ಎಸಗುವುದಕ್ಕೆ ಹಲವಾರು ನಿದರ್ಶನಗಳಿವೆ. ಕಂಪೆನಿಗೆ ಪ್ರಾಮಾಣಿಕತೆ, ಧೈರ್ಯವಿದ್ದರೆ ಉದ್ಯೋಗ, ಗುತ್ತಿಗೆ, ಮಾರಾಟಗಾರರು, ಉದ್ಯಮಗಳು, ಹೊಣೆಗಾರಿಕೆ ನಿಧಿ, ಗುತ್ತಿಗೆ ನೌಕರಿಗೆ ಸಂಬಂಧಿಸಿ ಶ್ವೇತ ಪತ್ರ ಹೊರಡಿಸಲಿ, ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಅದರ ಬದಲಿಗೆ ತಪ್ಪು ಮಾಹಿತಿಗಳನ್ನು ಒಳಗೊಂಡ ಸುಳ್ಳಿನ ಗೋಪುರದ ಮೂಲಕ 233 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಮಾಡಿರುವ ವಂಚನೆಯನ್ನು ಮರೆ ಮಾಚಲು ಮುಂದಾದರೆ ಜನಾಕ್ರೋಶ ಮತ್ತಷ್ಟು ಹೆಚ್ಚಾಗಲಿದೆ. ಇಂತಹ ಜಾರಿಕೊಳ್ಳುವ ಅತಿ ಜಾಣತಣದಿಂದ ಜನರನ್ನು ದಿಕ್ಕುತಪ್ಪಿಸಲು ಸಾಧ್ಯವಿಲ್ಲ. ಈಗ ಆಗಿರುವ ನೇಮಕಾತಿಯನ್ನು ರದ್ದುಗೊಳಿಸಿ ಮಹಿಷಿ ವರದಿಯ ಆಧಾರದಲ್ಲಿ ಮರು ನೇಮಕಾತಿ ನಡೆಸುವುದೇ ಸ್ಥಳೀಯರ ಒಕ್ಕೊರಲ ಬೇಡಿಕೆ. ಅದರ ಹೊರತಾದ ಯಾವುದೆ ಸಮಜಾಯಿಷಿಗಳನ್ನು ಒಪ್ಪಿಕೊಳ್ಳುವುದಿಲ್ಲ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.