
Nota made a big defference ! ನೋಟಾ ಮತಗಳೇ ನಿರ್ಣಾಯಕವಾಯಿತೇ..?: ಬೆಳಗಾವಿ ಫಲಿತಾಂಶಕ್ಕೆ ಅನಿರೀಕ್ಷಿತ ತಿರುವು!
ಕುಂದಾನಗರಿ ಬೆಳಗಾವಿ ಚುನಾವಣಾ ಫಲಿತಾಂಶ ಇಡೀ ರಾಜ್ಯದ ಜನರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದಂತೂ ನಿಜ. ಕೊನೆಗೆ ಮಂಗಳಾ ಅಂಗಡಿ ಮೊಗದಲ್ಲಿ ನಗು ಅರಳಿದರೆ, ಕೊನೆ ವರೆಗೆ ಹೋರಾಡಿ ವೀರೋಚಿತ ಸೋಲು ಕಂಡ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ವಿಷಾದದ ಜೊತೆಗೆ ಭರ್ಜರಿ ಸ್ಪರ್ಧೆ ನೀಡಿದ ನೆಮ್ಮದಿ ಇದೆ.
ಈ ಚುನಾವಣೆಯಲ್ಲಿ ನೋಟಾ ಮತಗಳು ನಿರ್ಣಾಯಕ ಪಾತ್ರ ವಹಿಸಿತೇ...? ಈ ಪ್ರಶ್ನೆಗೆ ಹೌದು ಎನ್ನುತ್ತಿದೆ ಈ ಕ್ಷೇತ್ರದ ಚುನಾವಣಾ ಅಂಕಿ ಅಂಶಗಳು.
ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಹೆಚ್ಚಾಗಿವೆ. ಬಿಜೆಪಿ ಶೇ. 43.07 ರಷ್ಟು ಮತ ಪಡೆದರೆ ಕಾಂಗ್ರೆಸ್ 42.56ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ.
ಇಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವಿನ ಅಂತರ ಕೇವಲ 5,240 ಮತಗಳು. ಆದರೆ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ನೋಟ ಮತಗಳು 10,631. ಅಂದರೆ, ಗೆಲುವಿನ ಅಂತರಕ್ಕಿಂತಲೂ ಹೆಚ್ಚು.
ಬಿಜೆಪಿಯ ಭದ್ರಕೋಟೆಯಲ್ಲಿ ಕೈ ಪಡೆ ತನ್ನ ಮತಗಳನ್ನು ಗಟ್ಟಿ ಮಾಡಿ ಕೊಳ್ಳುವಲ್ಲಿ ಮೇಲ್ನೋಟಕ್ಕೆ ಯಶಸ್ವಿಯಾಗಿದೆ. ಇದು ಮುಂಬರುವ ಚುನಾವಣೆಗೆ ಮತ್ತಷ್ಟು ಸ್ಫೂರ್ತಿ ಮತ್ತು ಹುಮ್ಮಸ್ಸು ನೀಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಗಿನ ಸಂಸದ ಸುರೇಶ್ ಅಂಗಡಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾದಿಸಿದ್ದರು. ಆದರೆ, ಈ ಬಾರಿ ಅತ್ಯಲ್ಪ ಮತಗಳ ಅಂತರದ ಗೆಲುವು ಮೂಲಕ ಬಿಜೆಪಿ ಸೇಫ್ ಆಗಿದೆ.
ಈ ಬಾರಿಯ ಬೆಳಗಾವಿ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಸಹಿತ ಇಡೀ ಕಮಲ ಪಡೆಯೇ ಪ್ರಚಾರ ನಡೆಸಿತ್ತು. ಆದರೂ ಬಿಜೆಪಿಗೆ ಈ ಫಲಿತಾಂಶ ದೊಡ್ಡ ಹೊಡೆತವನ್ನು ನೀಡಿದೆ ಎಂದರೆ ತಪ್ಪಾಗದು.
ಇನ್ನೂ ಮಹಾರಾಷ್ಟ್ರ ಏಕೀಕರಣ ಸಭಾನಿಂದ ಕಣಕ್ಕಿಳಿದ ಶುಭಮ್ ವಿಕ್ರಾಂತ್ ಶೆಲ್ಕೆ ಭರ್ಜರಿ ಎನಿಸುವಷ್ಟು 1,16,923 ಮತಗಳನ್ನು ಪಡೆದಿದ್ದಾರೆ.
ಪ್ರತಿ ಬಾರಿ ಈ ಪಕ್ಷದ ಪರೋಕ್ಷ ಬೆಂಬಲ ಬಿಜೆಪಿ ಪಡೆದುಕೊಳ್ಳುತ್ತಿತ್ತು.. ಇದೂ ಬಿಜೆಪಿಯ ಅತ್ಯಲ್ಪ ಮತಗಳ ಗೆಲುವಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಯಾರಿಗೆ ಎಷ್ಟು ಮತ?
ಮಂಗಳಾ ಅಂಗಡಿ (ಬಿಜೆಪಿ):
4,40,327
(ಇವಿಎಂ 4,36,868 + ಪೋಸ್ಟಲ್ 3,459) ಶೇ. 43.07
ಸತೀಶ್ ಜಾರಕಿಹೊಳಿ (ಕಾಂಗ್ರೆಸ್):
4,35,087 (ಇವಿಎಂ 4,32,882+ಪೋಸ್ಟಲ್ 2,205) ಶೇ. 42.56
ನೋಟಾ:
10,631 (ಇವಿಎಂ 10,563 + ಪೋಸ್ಟಲ್ 68) ಶೇ. 1.04