Nationwide Poster Agitation- ಸರ್ಕಾರವನ್ನು ಟೀಕಿಸಿದ 17 ಮಂದಿ ಬಂಧನ: ವ್ಯಗ್ರಗೊಂಡ ಕಾಂಗ್ರೆಸ್, ಪೋಸ್ಟರ್ ಚಳವಳಿ
ಕೊರೋನಾ ಸೋಂಕನ್ನು ನಿಯಂತ್ರಿಸುವಲ್ಲಿ ಹಾಗೂ ಆರೋಗ್ಯ ವ್ಯವಸ್ಥೆಯಲ್ಲಿ ದಯನೀಯ ವೈಫಲ್ಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಯವರನ್ನು ಟೀಕಿಸಿ ಪೋಸ್ಟರ್ ಪ್ರಕಟಿಸಿದ್ದ 17 ಮಂದಿಯನ್ನು ನವದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಈಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ಸರ್ಕಾರ ಹಾಗೂ ಮೋದಿ ಬಗ್ಗೆ ಜನಾಕ್ರೋಶ ಬಯಲಾಗುತ್ತಿದ್ದಂತೆಯೇ, ಹೋರಾಟದ ಕಿಚ್ಚನ್ನು ಹತ್ತಿಕ್ಕಲು ಗೃಹ ಇಲಾಖೆ ಪೊಲೀಸರನ್ನು ಬಳಸಿಕೊಂಡಿದೆ. 17 ಮಂದಿಯನ್ನು ಬಂಧಿಸಿ ಅವರ ವಿರುದ್ಧ ಸಾರ್ವಜನಿಕ ಆಸ್ತಿ ವಿರೋಪಗೊಳಿಸಿದ ಕಾಯ್ದೆ ಮತ್ತು ಸೆಕ್ಷನ್ 188ರಡಿ ಒಟ್ಟು 21 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ಬಂಧನಕ್ಕೆ ಇದೀಗ ಕಾಂಗ್ರೆಸ್ ಕೂಡ ಪ್ರತಿಕ್ರಿಯೆ ನೀಡಿದ್ದು, ಇದೊಂದು ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದು ಬಣ್ಣಿಸಿದೆ. ಅಲ್ಲದೆ, ರಾಷ್ಟ್ರದಾದ್ಯಂತ ಪೋಸ್ಟರ್ ಚಳವಳಿಯನ್ನು ಹಮ್ಮಿಕೊಂಡಿದೆ.
ಇದಕ್ಕೆ ಮುನ್ನುಡಿ ಬರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರೆಸ್ಟ್ ಮಿ ಟೂ (ನನ್ನನ್ನೂ ಬಂಧಿಸಿ) ಎಂದು ಟ್ವಿಟ್ಟರ್ ಖಾತೆಯಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದಾರೆ.
ಮೋದಿಜೀ, ದೇಶದ ಮಕ್ಕಳ ಪಾಲಿಗೆ ಸಿಗಬೇಕಾದ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕೊಟ್ಟಿರಿ..? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆ ಮಾಡಿರುವ ಫೋಟೋವನ್ನು ಟ್ವಿಟ್ಟರ್ ಪ್ರೊಫೈಲ್ ಫೋಟೋವನ್ನಾಗಿ ಮಾಡಿಕೊಂಡಿದ್ಧಾರೆ.
ಈ ಬಗ್ಗೆ ಇತರ ಕಾಂಗ್ರೆಸ್ ನಾಯಕರೂ ದನಿಗೂಡಿಸಿದ್ಧಾರೆ. ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ವಕ್ತಾರರಾದ ಡಾ. ಶಮಾ ಮೊಹಮ್ಮದ್, ಹೋರಾಟಗಾರ ಸಾಕೇತ್ ಗೋಖಲೆ ಮತ್ತಿತರರು ಕೇಂದ್ರದ ಈ ಸರ್ವಾಧಿಕಾರಿ ಧೋರಣೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ಧಾರೆ.
ಜೈರಾಮ್ ರಮೇಶ್, ನಾನು ನನ್ನ ಮನೆಯ ಕಂಪೌಂಡ್ ಗೋಡೆ ಮೇಲೆಲ್ಲ ಪೋಸ್ಟರ್ ಅಂಟಿಸುತ್ತೇನೆ. ನನ್ನನ್ನೂ ಬಂಧಿಸಿ ಎಂದು ದೆಹಲಿ ಪೊಲೀಸರಿಗೆ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ.