VHP leader Sharan Pumpwell- ಶರಣ್ ಪಂಪುವೆಲ್, ದುರ್ಗಾವಾಹಿನಿ ಬಗ್ಗೆ ಸಾಮಾಜಿಕ ತಾಣದಲ್ಲಿ ಅವಹೇಳನ: ಹಿಂದೂ ಸಂಘಟನೆಗಳ ಖಂಡನೆ
ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಬಗ್ಗೆ ಹಾಗು ದುರ್ಗಾವಾಹಿನಿ ಸಂಘಟನೆಯ ಬಗ್ಗೆ ವಾಟ್ಸಪ್ಪ್ ಗ್ರೂಪ್ ನಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಮಾನಹಾನಿಕಾರಕ ಮತ್ತು ಅವಹೇಳನಕಾರಿ ಪ್ರಕಟಣೆಗೆ ದುರ್ಗಾವಾಹಿನಿ ಸಹಿತ ಹಿಂದೂ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸಿದೆ.
ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ರವರ ಬಗ್ಗೆ ಹಾಗು ದುರ್ಗಾವಾಹಿನಿ ಸಂಘಟನೆಯ ಬಗ್ಗೆ ನಿರಂತರ ಅಪಪ್ರಚಾರ ಸುಳ್ಳು ಸುದ್ದಿಗಳನ್ನು ಹರಡಿ ಅವಹೇಳನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಅವಮಾನ ಮಾಡುತ್ತಿರುವುದು ಕಂಡು ಬಂದಿರುವುದು ಖಂಡನಾರ್ಹ ಎಂದು ದುರ್ಗಾ ವಾಹಿನಿ ಹಾಗೂ ಹಿಂದೂ ಸಂಘಟನೆಗಳು ಹೇಳಿವೆ.
ವಿಶ್ವ ಹಿಂದೂ ಪರಿಷತ್ ಮಹಿಳಾ ವಿಭಾಗವಾದ ದುರ್ಗಾವಾಹಿನಿ ಮೇಲೆ ಅಪಪ್ರಚಾರ ಮತ್ತು ಸುಳ್ಳು ಆರೋಪಗಳನ್ನು ಹಾಕಲಾಗುತ್ತಿದೆ. ಮಂಗಳೂರು ನಗರದಲ್ಲಿ ನಿರಂತರ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಲವ್ ಜಿಹಾದ್ ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆ ದುರ್ಗಾವಾಹಿನಿಯಾಗಿದೆ. ಇದರ ಜೊತೆಗೆ ಮಹಿಳೆಯರಿಗೆ ಆತ್ಮಸ್ಥರ್ಯ ತುಂಬಿಸಲು, ಪುನರ್ವಸತಿಗಾಗಿ ನಿರಂತರ ಸೇವೆ ಮಾಡುತ್ತಿದೆ. ಇದನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ದುರ್ಗಾವಾಹಿನಿಯ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಅದು ಹೇಳಿದೆ.
ಈಗಾಗಲೇ ನಗರದ ಕೆಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದು, ವಿಭಾಗ ಕಾರ್ಯದರ್ಶಿಗಳು ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ. ಇದನ್ನು ಪರಿಗಣಿಸಿ ಪೊಲೀಸ್ ಇಲಾಖೆ ತಕ್ಷಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಸುಕನ್ಯಾ ರಾವ್ ಆಗ್ರಹಿಸಿದ್ದಾರೆ.