sought action against pvt hospital - "ನಿಯಮ ಉಲ್ಲಂಘಿಸುತ್ತಿರುವ ಖಾಸಗಿ ಆಸ್ಪತ್ರೆಗಳನ್ನು ಕಾನೂನು ಕ್ರಮಗಳ ಮೂಲಕ ದಂಡಿಸಿ"
ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೊರೋನ ಸೋಂಕಿತರ ಚಿಕಿತ್ಸೆಯಲ್ಲಿ ವಿಪರೀತ ದರ ವಿಧಿಸುವುದು, ಸರಕಾರಿ ಕೋಟಾ ಬೆಡ್ ಹಂಚಿಕೆಯಲ್ಲಿ ಯಾರ ಭಯವೂ ಇಲ್ಲದೆ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘಿಸುವುದು ದಿನ ನಿತ್ಯ ವರದಿಯಾಗುತ್ತಿದೆ. ಇದು ಜನಸಾಮಾನ್ಯರಲ್ಲಿ ಭಯ, ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಇಂತಹ ಆಸ್ಪತ್ರೆಗಳ ಆಡಳಿತ ಮಂಡಳಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳ ಸಹಿತ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಐಸಿಯು, ವೆಂಟಿಲೇಟರ್ ಅಗತ್ಯ ಇರುವ ಕೊರೋನಾ ರೋಗಿಗಳಿಗೆ ಎಪಿಎಲ್, ಬಿಪಿಎಲ್ ತಾರತಮ್ಯವಿಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಅಡಿ ಉಚಿತ ಚಿಕಿತ್ಸೆಯ ಅವಕಾಶವನ್ನು ಒದಗಿಸಿದೆ. ಆದರೆ ಖಾಸಗಿ ಆಸ್ಪತ್ರೆಗಳು ಈ ಕುರಿತು ರೋಗಿಗಳ ಕಡೆಯವರಿಗೆ ತಪ್ಪು ಮಾಹಿತಿಗಳನ್ನು ಒದಗಿಸಿ ಆಯುಷ್ಮಾನ್ ಚಿಕಿತ್ಸೆಯನ್ನು ನಿರಾಕರಿಸುತ್ತಿವೆ. ತಮ್ಮಲ್ಲಿರುವ ಸರಕಾರಿ ಕೋಟಾದ ಐಸಿಯು ಬೆಡ್ ಗಳ ಸಂಖ್ಯೆಯನ್ನು ಕಡಿಮೆ ತೋರಿಸಿ ವಂಚಿಸುವುದು ವ್ಯಾಪಕವಾಗಿ ನಡೆಯುತ್ತಿದೆ. ಇಷ್ಟಲ್ಲದೆ, ಆಯುಷ್ಮಾನ್ ಹಾಸಿಗೆಯ ರೋಗಿಗಳಿಗೆ ತಾಂತ್ರಿಕ ಅಂಶಗಳನ್ನು ಮುಂದಿಟ್ಟು ಪ್ರತ್ಯೇಕ ಬಿಲ್ ನೀಡುವ ಅಕ್ರಮವೂ ನಡೆಯುತ್ತಿದೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ಕೋವಿಡ್ ಸೋಂಕಿತರ ಚಿಕಿತ್ಸೆಗೆ ದುಬಾರಿ ದರ ನಿಗದಿ ಮಾಡಿದ್ದರೂ, ಅದನ್ನು ಮೀರಿ ಪಿಪಿಇ ಕಿಟ್,ಆಕ್ಸಿಜನ್, ಔಷಧಿ, ವೈದ್ಯರ ವೆಚ್ಚವನ್ನು ಪ್ರತ್ಯೇಕವಾಗಿ ಬಿಲ್ ಗೆ ಸೇರಿಸುವ ಸುಲಿಗೆ ಕ್ರಮವೂ ಜಾರಿಯಲ್ಲಿದೆ. ಈ ಕುರಿತು ದೂರು ನೀಡಿದಲ್ಲಿ ಜಿಲ್ಲಾಡಳಿತ ಅಕ್ರಮವಾಗಿ ಹೆಚ್ಚುವರಿ ಪಡೆದಿರುವ ಮೊತ್ತವನ್ನು ರೋಗಿಗಳಿಗೆ ವಾಪಾಸ್ ಕೊಡಿಸುವ ಕ್ರಮ ಜಾರಿಯಲ್ಗಿದ್ದರೂ, ಇದು ನೂರರಲ್ಲಿ ಒಬ್ಬಿಬ್ಬರಿಗೆ ಮಾತ್ರ ನ್ಯಾಯ ಒದಗಿಸುತ್ತದೆ.
ದಂಡನೆಯ ಭಯ ಇಲ್ಲದ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ವೆಚ್ಚವನ್ನು ಅಕ್ರಮವಾಗಿ ಬಿಲ್ ಗೆ ಸೇರಿಸುವುದು ಇದರಿಂದಾಗಿ ಮುಂದುವರಿದಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿ ಮೊತ್ತ ವಾಪಾಸಾತಿಯ ಜೊತೆಯಲ್ಲಿ, ಆ ರೀತಿ ಸುಲಿಗೆ ಮಾಡುವ, ಅಯುಷ್ಮಾನ್ ಬೆಡ್ ನ ರೋಗಿಗಳಿಗೆ ಪ್ರತ್ಯೇಕ ಬಿಲ್ ನೀಡುವ, ಐಸಿಯು, ವೆಂಟಿಲೇಟರ್ ಗಳಲ್ಲಿ ಕಳ್ಳ ಲೆಕ್ಕ ತೋರಿಸಿ ಉಚಿತ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಪ್ರಕರಣ ಹೂಡಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕಾನೂನಿನ ಭಯ ಮಾತ್ರವೇ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಹಾಕಲಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಇದಲ್ಲದೆ ಖಾಸಗಿ ಆಸ್ಪತ್ರೆಗಳು ಐಸಿಯು, ವೆಂಟಿಲೇಟರ್ ಗಳನ್ನು ಆಯುಷ್ಮಾನ್ ಅಡಿ ನೀಡದೆ ವಂಚಿಸುವುದನ್ನು ತಡೆಯಲು ಈ ಬೆಡ್ ಗಳನ್ನು ಕೇಂದ್ರೀಕೃತ ವ್ಯವಸ್ಥೆಯ ಅಡಿಗೆ ತಂದು ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದಲೆ ಆಸ್ಪತ್ರೆವಾರು ಐಸಿಯು, ವೆಂಟಿಲೇಟರ್ ಲಭ್ಯತೆಯ ಮಾಹಿತಿ ದೊರಕುವಂತಾಗಬೇಕು. ಅದಕ್ಕಾಗಿ ಜಿಲ್ಲಾಡಳಿತ ತಕ್ಷಣದಿಂದಲೇ ಹೆಲ್ಪ್ ಲೈನ್ ಆರಂಭಿಸಬೇಕು ಎಂದು ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಇವತ್ತು ಬಹುತಕ ಆಸ್ಪತ್ರೆಗಳಲ್ಲಿ ಐಸಿಯು, ವೆಂಟಿಲೇಟರ್ ಗಳು ಭರ್ತಿ ಎಂದು ರೋಗಿಗಳನ್ಜು ಹಿಂದಕ್ಕೆ ಬಿಡುತ್ತಿದ್ದಾರೆ. ಸೋಂಕು ಇಳಿಮುಖ ಎಂದು ಜಿಲ್ಲಡಳಿತದ ಪ್ರಕಟನೆ ತಿಳಿಸುವಾಗ ಇದು ವಿಚಿತ್ರ ಬೆಳವಣಿಗೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.