-->
Srilaxmi troll incident-Mattu reaction; ಶ್ರೀಲಕ್ಷ್ಮೀ ಟ್ರಾಲ್ ಪ್ರಕರಣ, ವೈರಲ್ ವೀಡಿಯೋ: ದಿನೇಶ್ ಅಮೀನ್ ಮಟ್ಟು ಏನಂತಾರೆ?

Srilaxmi troll incident-Mattu reaction; ಶ್ರೀಲಕ್ಷ್ಮೀ ಟ್ರಾಲ್ ಪ್ರಕರಣ, ವೈರಲ್ ವೀಡಿಯೋ: ದಿನೇಶ್ ಅಮೀನ್ ಮಟ್ಟು ಏನಂತಾರೆ?



ಲೇಖನ- ದಿನೇಶ್ ಅಮೀನ್ ಮಟ್ಟು


ಏಳೆಂಟು ವರ್ಷಗಳ ಹಿಂದೆ ಕನ್ನಡ ಟಿವಿ ಚಾನೆಲ್ ಗಳಲ್ಲಿರುವ ಬೆಸ್ಟ್ ಮಹಿಳಾ ಆ್ಯಂಕರ್ ಯಾರು ಎಂದು ಕೇಳಿದವರಿಗೆ ನಾನು ತಪ್ಪದೆ ಹೇಳುತ್ತಿದ್ದ ಹೆಸರು ಶ್ರೀಲಕ್ಷ್ಮಿ ರಾಜ್ ಕುಮಾರ್. ಆಗ ಅವರು ಜನಶ್ರೀ ಚಾನೆಲ್ ಆ್ಯಂಕರ್.


ಬಹುಷ: ನನ್ನ ಬೆಸ್ಟ್ ಟಿವಿ ಡಿಬೇಟ್ ಗಳಲ್ಲಿ ಹಲವನ್ನು ಅವರು ಆ್ಯಂಕರ್ ಆಗಿ ನಡೆಸಿಕೊಟ್ಟಿರುವುದು. ಆ ಕಾಲದಲ್ಲಿ ಬಹಳಷ್ಟು ಆ್ಯಂಕರ್ ಗಳ ಒಡನಾಟವಿದ್ದರೂ ‘’ಸಾರ್, ದೇಶ ಮತ್ತು ರಾಜ್ಯದ ರಾಜಕೀಯದ ಬಗ್ಗೆ ತಿಳುವಳಿಕೆ ನೀಡುವ ಯಾವುದಾದರೂ ಪುಸ್ತಕಗಳಿದ್ದರೆ ತಿಳಿಸಿ’’ ಎಂದು ಕೇಳಿದ್ದ ಏಕೈಕ ಆ್ಯಂಕರ್ ಶ್ರೀಲಕ್ಷ್ಮಿ. ಟಿವಿ ಡಿಬೇಟ್ ನಲ್ಲಿ ಭಾಗವಹಿಸುವುದು ಕಡಿಮೆಯಾದ ನಂತರ ಅವರನ್ನು ಭೇಟಿಯಾಗಿಲ್ಲ.



ಅಂತರಜಾತಿ ಮದುವೆಯಾಗಿರುವ ಶ್ರೀಲಕ್ಷ್ಮಿ ಮೂಲಕ, ಅವರ ಪತಿ ರಾಜಕುಮಾರ್ ಹೊಳೆಆಲೂರು ಅವರೂ ನನಗೆ ಪರಿಚಿತರು. ಗಂಡ-ಹೆಂಡತಿ ಗೆಳೆಯರ ಜೊತೆ ಸೇರಿ ಪ್ರತಿವರ್ಷ ನಡೆಸುವ ‘ಡಿವಿಜಿ ಸ್ಮರಣೆ’ಕಾರ್ಯಕ್ರಮದಲ್ಲಿಯೂ ಒಮ್ಮೆ ನಾನು ಭಾಷಣಕಾರನಾಗಿದ್ದೆ.

ವೈಯಕ್ತಿಕ ಜೀವನದಲ್ಲಿ ಬಹಳ ಕಷ್ಟಪಟ್ಟು ಬೆಳೆದ ಹೆಣ್ಣುಮಗಳು. ನಡುವೆ ಚಾನೆಲ್ ನಿಂದ ಹಠಾತ್ತನೆ ನಿರ್ಗಮಿಸಿದಾಗ ಒಮ್ಮೆ ಪೋನ್ ಮಾಡಿದ್ದ ನೆನಪು. ವೃತ್ತಿ ಸಂಬಂಧಿ ಮಾನಸಿಕ ಒತ್ತಡದಿಂದಾಗಿ ವೈಯಕ್ತಿಕ ಬದುಕಿನಲ್ಲಿ ನೋವು-ಕಷ್ಟ ಉಂಡ ವಿಷಯ ಗೊತ್ತಾಗಿ ಬೇಸರವಾಗಿತ್ತು.



ಆದರೆ ಟಿವಿ ಚಾನೆಲ್ ಗೆ ಮರುಪ್ರವೇಶದ ನಂತರ ಶ್ರೀಲಕ್ಷ್ಮಿಯಲ್ಲಿನ ಬದಲಾವಣೆಯನ್ನು ಗಮನಿಸಿದ್ದೆ. ಇದು ಅವರ ಐಡಿಯಾಲಜಿಗೆ ಸಂಬಂಧಿಸಿದ್ದಲ್ಲ, ಕಾರ್ಯಶೈಲಿಗೆ ಸಂಬಂಧಿಸಿದ್ದು. ಮೆಲುದನಿಯಲ್ಲಿ, ವೀಕ್ಷಕರಿಗೆ ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಮಾತನಾಡುತ್ತಿದ್ದ ಶ್ರೀಲಕ್ಷ್ಮಿ ಇದ್ದಕ್ಕಿದ್ದ ಹಾಗೆ ಕಿರುಚಾಡುವಂತೆ ಏರು ದನಿಯಲ್ಲಿ, ಹೇಳಿದ್ದನ್ನು ಕೇಳಬೇಕಷ್ಟೇ ಎಂಬ ಧಾಟಿಯಲ್ಲಿ ಮಾತನಾಡುತ್ತಿರುವುದು ನೋಡಿ ಆಶ್ಚರ್ಯಪಟ್ಟಿದ್ದೆ. ವೃತ್ತಿಯಲ್ಲಿ ರಾಜಿಯಾಗುವುದು ಅನಿವಾರ್ಯ ಎಂದು ಸುಮ್ಮನಾಗಿದ್ದೆ. ಇತ್ತೀಚೆಗೆ ಟಿವಿ5 ನಲ್ಲಿ ನೋಡಿದಾಗ ಮತ್ತೆ ಹಿಂದಿನ ಶ್ರೀಲಕ್ಷ್ಮಿ ರೀತಿ ಕಂಡಿದ್ದರು. (ನಾನು ಇತ್ತೀಚೆಗೆ ಕನ್ನಡದ ಟಿವಿಚಾನೆಲ್ ಗಳನ್ನು ನೋಡುವುದು ಕಡಿಮೆ)


ಕಳೆದ ಕೆಲವು ದಿನಗಳಿಂದ ಶ್ರೀ ಲಕ್ಷ್ಮಿ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಅವರು ನೀಡಿದ್ದಾರೆನ್ನಲಾದ ಹೇಳಿಕೆಯನ್ನು ಆಧರಿಸಿ ಅವರ ವಿರುದ್ದ ಟೀಕಪ್ರಹಾರಗಳು ಶುರುವಾಗಿದೆ. ಅದನ್ನು ನೋಡಿ ನನಗೆ ನಿಜಕ್ಕೂ ಬೇಸರವಾಗಿತ್ತು. ಆಗ ಪೋನ್ ಮಾಡಿ ನಿಜ ಸಂಗತಿ ತಿಳಿದುಕೊಳ್ಳಬೇಕೆಂದು ಅನಿಸಿತ್ತು. ಅವರೇ ಸ್ಪಷ್ಟೀಕರಣ ನೀಡಲಿ ಎಂದು ಸುಮ್ಮನಿದ್ದೆ.

ನಿನ್ನೆ ಅವರೇ ಮಾತನಾಡಿದ ವಿಡಿಯೋ ನೋಡಿದೆ, ನಿಜಕ್ಕೂ ನನಗೆ ನಿರಾಶೆಯಾಯಿತು, ಬೇಸರವಾಯಿತು. ನನಗೆ ಯಾಕೆ ಹೀಗಾಯಿತು ಎಂದು ಶ್ರೀಲಕ್ಷ್ಮಿಯವರೇ ತನ್ನ ವಿಡಿಯೋವನ್ನು ಮತ್ತೊಮ್ಮೆ ನೋಡಿದರೆ ಅವರಿಗೂ ಮನವರಿಕೆಯಾಗಬಹುದೆಂದು ನಂಬಿದ್ದೇನೆ.



1. ಮಾಧ್ಯಮ ರಂಗದಲ್ಲಿ ಮುಖ್ಯವಾಗಿ ಕಳೆದ ಆರೇಳು ವರ್ಷಗಳಲ್ಲಿ ನೂರಾರು ಪತ್ರಕರ್ತರು ರಾಜೀನಾಮೆ ನೀಡಿ ಹೊರಬಂದಿದ್ದಾರೆ, ಹೊರದಬ್ಬಿಸಿಕೊಂಡು ಬೀದಿಗೆ ಬಿದ್ದಿದ್ದಾರೆ, ಇದು ಇನ್ನಷ್ಟು ಕಾಲ ಮುಂದುವರಿಯಲಿದೆ. ಆದರೆ ಅವರಲ್ಲಿ ಐಡಿಯಾಲಜಿಯ ಕಾರಣದಿಂದಾಗಿ ಹೊರಬಿದ್ದವರಲ್ಲಿ ಶೇಕಡಾ 99ರಷ್ಟು ಮಂದಿ ಈಗಿನ ಪ್ರಭುತ್ವದ ಐಡಿಯಾಲಜಿಗೆ ವಿರುದ್ಧವಾಗಿದ್ದವರು. ಉಳಿದ ಒಂದು ಪರ್ಸೆಂಟ್ ನಲ್ಲಿ ಪ್ರಭುತ್ವವನ್ನು ಎದುರುಹಾಕಿಕೊಂಡು ಕಷ್ಟ-ನಷ್ಟಕ್ಕೀಡಾಗಿರುವ ಪವರ್ ಟಿವಿಯ ಕೆಲವು ಪತ್ರಕರ್ತರು ಸೇರಿದ್ದಾರೆ. ಬಹುತೇಕ ಕನ್ನಡ ಟಿವಿ ಚಾನೆಲ್ ಗಳು ಪ್ರಭುತ್ವವನ್ನು ಪ್ರಶ್ನಿಸುವುದನ್ನೇ ಮರೆತಿರುವ ಕಾರಣದಿಂದಾಗಿ ಪ್ರಭುತ್ವವನ್ನು ಟೀಕಿಸುವುದಿಲ್ಲ ಎನ್ನುವ ಕಾರಣ ನೀಡಿ ಹೊರಬಿದ್ದವರು ಇಲ್ಲವೇ ಇಲ್ಲ. ಈ ಹಿನ್ನೆಲೆಯಿಂದಾಗಿ ಶ್ರೀಲಕ್ಷ್ಮಿ ಹೆಚ್ಚು ಚರ್ಚೆಯಲ್ಲಿದ್ದಾರೆ.



2. ಕಳೆದ ಆರೇಳು ವರ್ಷಗಳಲ್ಲಿ ರಾಷ್ಟ್ರವಾದಿ, ದೇಶಪ್ರೇಮಿ, ಧರ್ಮ, ಸಂಸ್ಕೃತಿ, ಜಾತ್ಯತೀತತೆ ಎಂಬ ಪದಗಳೆಲ್ಲ ಹೊಸ ಅರ್ಥ ಪಡೆದುಕೊಳ್ಳತೊಡಗಿದೆ. ಆದ್ದರಿಂದ ಶ್ರೀ ಲಕ್ಷ್ಮಿಯವರು ಈ ವಿಶೇಷಣಗಳನ್ನು ಬಳಸಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕಾಗಿತ್ತು.



3. ಶ್ರೀಲಕ್ಷ್ಮಿಯವರು ಟ್ರೋಲ್ ಗೊಳಗಾಗಿರುವುದು ತಾವು ಕೆಲಸ ಮಾಡುತ್ತಿದ್ದ ಚಾನೆಲ್ ಗೆ ರಾಜೀನಾಮೆ ನೀಡಿದ್ದಕ್ಕಲ್ಲ, ಇವರ ಜೊತೆಯಲ್ಲಿಯೇ ಇನ್ನೂ ಹಲವರು ರಾಜೀನಾಮೆ ನೀಡಿದ್ದಾರೆ, ನೂರಾರು ಮಂದಿ ಪತ್ರಕರ್ತರು ತಮ್ಮ ಸಂಸ್ಥೆಗಳಿಗೆ ರಾಜೀನಾಮೆ ನೀಡಿದ್ದಾರೆ, ಶ್ರೀಲಕ್ಷ್ಮಿಯವರು ಕೂಡಾ ಹಿಂದೆ ರಾಜಿನಾಮೆ ನೀಡಿದ್ದರು.



ಈ ಬಾರಿ ಅವರು ವಿವಾದಕ್ಕೆ ಆಹಾರವಾಗಿರುವುದು ವೈರಲ್ ಆಗಿರುವ ಅವರದ್ದೆನ್ನಲಾದ ಒಂದು ಹೇಳಿಕೆಯಿಂದ. ಇಂತಹ ಜಗಳ ಹಚ್ಚುವುದಕ್ಕೆ ಕುಖ್ಯಾತಿ ಪಡೆದಿರುವ ಕಿಡಿಗೇಡಿಯೊಬ್ಬ ಇವರನ್ನು ರಾಷ್ಟ್ರವಾದಿ ಪತ್ರಕರ್ತೆ ಎಂದು ಬಣ್ಣಿಸಿದ್ದಲ್ಲದೆ, ‘’ದೇವಸ್ಥಾನದ ಪ್ರಸಾದ ತಿಂದಾದರೂ ಬದುಕುವೆ ಆದರೆ ಪ್ರಧಾನಿಯನ್ನು ಟೀಕಿಸಲಾರೆ ಎಂದು ಶ್ರೀಲಕ್ಷ್ಮಿ ಹೇಳಿದರು’’ ಎಂದು ಬರೆದುಕೊಂಡಿದ್ದನಂತೆ. ಅದರ ಆಧಾರದಲ್ಲಿ ಒಂದಷ್ಟು ಪೋಸ್ಟರ್ ಗಳು ಹರಿದಾಡತೊಡಗಿತು, , ತಕ್ಷಣ ಜಾಗೃತರಾದ ಮೋದಿ ವಿರೋಧಿಗಳು ಶ್ರೀಲಕ್ಷ್ಮಿಯವರ ಮೇಲೆ ಮುಗಿಬಿದ್ದರು.



4. ಶ್ರೀಲಕ್ಷ್ಮಿಯವರು ವಿವರಣೆ ನೀಡಿ ಈ ವಿವಾದವನ್ನು ಬಗೆಹರಿಸಿಕೊಳ್ಳಬಹುದು ಎಂದು ನಾನು ನಿರೀಕ್ಷಿಸಿದ್ದೆ. ಆದರೆ ನಿನ್ನೆ ಸಂಜೆ ಅವರು ಬಿಡುಗಡೆ ಮಾಡಿದ ವಿಡಿಯೋ ನೋಡಿ ನಿರಾಶೆಯಾಯಿತು. ಅದರಲ್ಲಿ ಅವರು ತಮಗೆ ಬೆದರಿಸಿದ್ದಾರೆ, ನಿಂದಿಸಿದ್ದಾರೆ ಎಂದೆಲ್ಲ ಹೇಳಿರುವುದು ಸರಿಯಾಗಿಯೇ ಇತ್ತು.



ಅದರ ಜೊತೆಗೆ ‘’ ನಾನೊಬ್ಬ ಕಸಬುದಾರ ಪತ್ರಕರ್ತೆ, ರಾಷ್ಟ್ರವಾದಿಯೂ ಅಲ್ಲ, ರಾಷ್ಟ್ರವಿರೋಧಿಯೂ ಅಲ್ಲ. ಒಂದು ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಯಾವ ಆಧಾರವೂ ಇಲ್ಲದೆ ಪ್ರಧಾನಿಯನ್ನು ನಿರಂತರವಾಗಿ ತರಾಟೆಗೆ ತೆಗೆದುಕೊಳ್ಳಬೇಕೆಂಬ ಆದೇಶವನ್ನು ಪಾಲಿಸುವುದು ನನ್ನ ವೃತ್ತಿಧರ್ಮಕ್ಕೆ ವಿರುದ‍್ಧವಾದುದು ಎನ್ನುವ ಕಾರಣಕ್ಕೆ ಬಿಟ್ಟುಬಂದೆ, ದೇವಸ್ಥಾನದಲ್ಲಿನ ಪ್ರಸಾದ ತಿಂದಾದರೂ ಬದುಕುತ್ತೇನೆ, ಆದರೆ ಪ್ರಧಾನಿ ವಿರುದ್ಧ ಮಾತನಾಡಲಾರೆ ಎಂದು ನಾನು ಹೇಳಿಲ್ಲ’’ ಎಂದು ಶ್ರೀಲಕ್ಷ್ಮಿಯವರು ಹೇಳಿದ್ದರೆ ನಾನು ಅವರನ್ನು ಈಗಲೂ ಬೆಸ್ಟ್ ಆ್ಯಂಕರ್ ಎಂದೇ ಸಮರ್ಥಿಸುತ್ತಿದ್ದೆ.



5. ಆದರೆ ದುರದೃಷ್ಟವಶಾತ್ ಈ ವಿಡಿಯೋ ಹೇಳಿಕೆ ಒಂದು ನಿರ್ದಿಷ್ಠ ಉದ್ದೇಶ ಇಟ್ಟುಕೊಂಡು ಡಿಸೈನ್ ಮಾಡಿದ ಹಾಗಿತ್ತು. ಅದರಲ್ಲಿ ತಾನೊಬ್ಬ ರಾಷ್ಟ್ರವಾದಿ ಪತ್ರಕರ್ತೆ ಎನ್ನವುದನ್ನು ಸಮರ್ಥಿಸಿಕೊಂಡರು. ಒಬ್ಬ ಪತ್ರಕರ್ತನಿಗೆ ಈ ಟ್ಯಾಗ್ ಯಾಕೆ ಬೇಕು ಎಂದು ಪ್ರಶ್ನಿಸಲಿಲ್ಲ. ಜೊತೆಗೆ ಅನಗತ್ಯವಾಗಿ ಸಾವರ್ಕರ್ ಅವರನ್ನು ಎಳೆದು ತಂದರು. ದೇಶಪ್ರೇಮ, ಸಂಸ್ಕೃತಿ ಎಲ್ಲ ಒಗ್ಗರಣೆಗಳೂ ಇತ್ತು. ಇವೆಲ್ಲ ಒತ್ತಟ್ಟಿಗಿರಲಿ, ಕೇವಲ ಬಲವಿರೋಧಿಗಳು ಮಾತ್ರವಲ್ಲ ತನ್ನನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವ ತಥಾಕಥಿತ ಬಲಪಂಥೀಯರ ವಿರುದ್ದ ಸಣ್ಣ ಆಕ್ಷೇಪ-ಅಸಮಾಧಾನವನ್ನೂ ಅವರ ವ್ಯಕ್ತಪಡಿಸಲಿಲ್ಲ.



6. ಉಳಿದದ್ದೇನೇ ಇರಲಿ, ಶ್ರೀಲಕ್ಷ್ಮಿಯವರು ತಮ್ಮ ನಿಲುವು, ಸಿದ್ಧಾಂತಗಳೇನು ಎನ್ನುವುದನ್ನು ದಿಟ್ಟತನದಿಂದ ಸ್ಪಷ್ಟಪಡಿಸಿದ್ದಕ್ಕೆ ಥ್ಯಾಂಕ್ಸ್ ಹೇಳಲೇ ಬೇಕು. ಇನ್ನು ಮುಂದೆ ಅವರು ಪೂರ್ಣಕಾಲಿಕ ಪತ್ರಕರ್ತರಾಗಿ ವೃತ್ತಿ ಮುಂದುವರಿಸಿದರೂ ಅವರನ್ನು ನಾವು ಅವರ ಘೋಷಿತ ಸೈದ್ಧಾಂತಿಕ ನಿಲುವಿನ ಮೂಲಕವೇ ಸ್ವೀಕರಿಸಬೇಕಾಗುತ್ತದೆ.


7. ಇಷ್ಟೆಲ್ಲ ಹೇಳಿದ ಮೇಲೆ ಕಾರಣಾಂತರಗಳಿಂದ ಒಬ್ಬ ಕಸಬುದಾರ ಪತ್ರಕರ್ತೆಯನ್ನು ನಾನು ಕಳೆದುಕೊಂಡ ಬಗ್ಗೆ ನನಗೆ ದು:ಖವಿದೆ.


8. ಇತರರು ಪ್ರಶ್ನಿಸುವ ಮೊದಲೇ ಸ್ಪಷ್ಟಪಡಿಸುತ್ತೇನೆ, ನಾನು ಪ್ರಜಾವಾಣಿ ತೊರೆದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿ ಸೇರಿದಾಗ ಅಲ್ಲಿಯ ವರೆಗೆ ನನ್ನನ್ನು ಇಷ್ಟಪಡುತ್ತಿದ್ದ ಬಹಳಷ್ಟು ಗೆಳೆಯರು ಇದೇ ರೀತಿ ನನ್ನ ಬಗ್ಗೆ ನನ್ನ ಬಳಿಯೇ ಹೇಳಿದ್ದು ನನಗೆ ನೆನಪಿದೆ, ಬಹುಷ: ಆ ಕಾಲದಲ್ಲಿ ಶ್ರೀಲಕ್ಷ್ಮಿಯವರ ಅಭಿಪ್ರಾಯವೂ ಇದೇ ಆಗಿತ್ತು ಎನ್ನುವುದು ನನಗೆ ಗೊತ್ತು. ಆದರೆ ನಾನು ಪ್ರಜಾವಾಣಿಗೆ ರಾಜೀನಾಮೆ ನೀಡಿ ಹೊಸ ಕೆಲಸ ಒಪ್ಪಿಕೊಂಡಿದ್ದೆ.



9. ಶ್ರೀಲಕ್ಷ್ಮಿಯವರ ರಾಜೀನಾಮೆ ಮತ್ತು ಅದಕ್ಕೆ ನೀಡಿದ್ದ ಕಾರಣವನ್ನು ಸಮರ್ಥಿಸುವ ಅವರ ಹೇಳಿಕೆ ಒಪ್ಪುವಂತಹದ್ದಲ್ಲ. ಅದೇ ರೀತಿ ಪ್ರಧಾನಿ ಮೋದಿ ವಿರುದ್ಧ ಏಕದನಿಯಲ್ಲಿ ಏಕಪಕ್ಷೀಯವಾಗಿ ಮಾಡುವ ಟೀಕಾಪ್ರಹಾರದ ಭಾಷಣ ಕೂಡಾ ಪತ್ರಿಕಾವೃತ್ತಿ ಅಲ್ಲ.



10. ಕೊನೆಯದಾಗಿ, ಶ್ರೀಲಕ್ಷ್ಮಿಯವರ ರಾಜೀನಾಮೆ ರಾಜಕೀಯವನ್ನು ಪ್ರಶ್ನಿಸುವ ಭರದಲ್ಲಿ ನಮ್ಮ ಅನೇಕ ಗೆಳೆಯರು ಅವರು ಹೆಣ್ಣು ಎಂಬುದನ್ನು ನೆನಪಲ್ಲಿಟ್ಟುಕೊಂಡು‌ಮಾಡಿದ ವೈಯಕ್ತಿಕ ಟೀಕೆ ಒಪ್ಪುವಂತಹದ್ದಲ್ಲ.

Ads on article

Advertise in articles 1

advertising articles 2

Advertise under the article