
Eid Celebrated at Vitla - ಈದ್ ಸಂಭ್ರಮದ ಘಮ ಘಮ ಬಿರಿಯಾನಿ ಕೊರೋನಾ ವಾರಿಯರಸ್ ಹೊಟ್ಟೆ ತಣಿಸಿತು
ಬಂಟ್ವಾಳ: ಈದ್ ಉಲ್ ಫಿತ್ರ್ ಸಂಭ್ರಮಕ್ಕೆ ಈ ಬಾರಿ ಲಾಕ್ ಡೌನ್ ಅಡ್ಡಿಯಾಯಿತು. ಆದರೂ ಹಬ್ಬಕ್ಕೆ ಮಾಡುವ ಘಮ ಘಮ ಬಿರಿಯಾನಿ ಮಾತ್ರ ಕೊರೋನಾ ವಾರಿಯರ್ಸ್ ಹೊಟ್ಟೆಯನ್ನು ತಣಿಸಿತು. ನೀಡಿದವರ ಮನವೂ ತಣಿಯಿತು.
ಸುಡು ಬಿಸಿಲ ಬೇಗೆಯನ್ನೂ ಲೆಕ್ಕಿಸದೆ, ಸರಿಯಾಗಿ ನಿದ್ರೆಯನ್ನೂ ಮಾಡದೆ ಸಮಾಜದ ನೆಮ್ಮದಿಗಾಗಿ, ಜನರ ಸುರಕ್ಷತೆಗಾಗಿ ಹಗಲು-ಇರುಳೂ ಕೆಲಸ ಮಾಡುವ ಪೊಲೀಸರು, ಹೋಮ್ ಗಾರ್ಡ್ಸ್, ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ರೋಗಿಗಳು, ಪಂಚಾಯತ್ ನೌಕರರು, ಪೌರ ಕಾರ್ಮಿಕರು ಸೇರಿದಂತೆ ನೂರಾರು ಜನರಿಗೆ ಮಧ್ಯಾಹ್ನದ ಬಿಸಿ ಬಿಸಿ ಬಿರಿಯಾನಿ ವಿತರಿಸಲಾಯಿತು.
ಜಿಲ್ಲೆಯಾದ್ಯಂತ ವಿವಿಧ ಸಾಮಾಜಿಕ ಕೆಲಸಗಳಿಲ್ಲಿ ಮುಂಚೂಣಿ ಸಂಸ್ಥೆಯಾಗಿರುವ ಎಂ. ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಸದಸ್ಯರು ರಶಿದ್ ವಿಟ್ಲ ನೇತೃತ್ವದಲ್ಲಿ ಮಧ್ಯಾಹ್ನದ್ ಬಿರಿಯಾನಿ ವಿತರಿಸಿ ಸಂತ್ರಪ್ತಿಪಟ್ಟರು.
ಕೊರೋನಾ ಲಾಕ್‌ಡೌನ್‌ನಲ್ಲಿ ಅವಿಶ್ರಾಂತವಾಗಿ ಸೇವೆ ಮಾಡುತ್ತಿರುವ ವಿಟ್ಲ ಪೊಲೀಸರು, ಅವರಿಗೆ ಸಹಾಯ ಮಾಡುತ್ತಿರುವ ಹೋಂ ಗಾರ್ಡ್ಸ್, ತ್ಯಾಜ್ಯ ವಿಲೇವಾರಿಯಲ್ಲಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಮಾನವೀಯ ನೆಲೆಯಲ್ಲಿ ಕೋವಿಡ್ ರೇಶನ್ ಕಿಟ್‌ಗಳನ್ನೂ ಹಸ್ತಾಂತರಿಸಲಾಯಿತು. ಈ ಮೂಲಕ ಅರ್ಥಪೂರ್ಣ ಈದ್ ಸಂಭ್ರಮಕ್ಕೆ ಮುನ್ನುಡಿ ಹಾಕಲಾಯಿತು.
ಕಳೆದ ವರ್ಷದಂತೆ ಈ ವರ್ಷ ಕೂಡ ಪವಿತ್ರ ಹಬ್ಬಕ್ಕೆ ಕೊರೋನಾ ಲಾಕ್‌ಡೌನ್ ಸಮಸ್ಯೆ ತಂದಿಟ್ಟಿತು. ಈದ್ ಸಂಭ್ರಮವನ್ನು ಮುಸಲ್ಮಾನ ಬಾಂಧವರು ಮನೆಯಲ್ಲೇ ಆಚರಿಸುವ ಪರಿಸ್ಥಿತಿ ಬಂದೊದಗಿತು. ಸಂಭ್ರಮದ ಆಚರಣೆಗೆ ಸಾಮಾಜಿಕ ಅಂತರದ ಅಡ್ಡಿಯಾಯಿತು.
ವಿಶೇಷ ಪ್ರಾರ್ಥನೆಗೆ ಈ ಬಾರಿ ಮಸೀದಿಯ ಮೆಟ್ಟಿಲು ಹತ್ತುವಂತಿರಲಿಲ್ಲ. ಶುಭಾಶಯ ವಿನಿಮಯ, ಆಲಿಂಗನ, ಹಸ್ತಲಾಘವ ಮಾಡುವಂತಿಲ್ಲ.
ಈ ಬಾರಿಯೂ ಮನೆಯ ನಾಲ್ಕು ಗೋಡೆಯ ಮಧ್ಯೆ ಕುಟುಂಬಿಕರ ಜೊತೆ ಈದ್ ಪ್ರಾರ್ಥನೆ ನೆರವೇರಿಸಿ ಮುಸ್ಲಿಮ್ ಬಾಂಧವರು ತೃಪ್ತಿಪಟ್ಟುಕೊಂಡರು. ಕೋವಿಡ್ ಸೋಂಕು ದೇಶದಿಂದ ತೊಲಗಿ ದೇಶ ಸಮೃದ್ಧಿಯಾಗಲಿ ಎಂಬ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯ ರಾಮ್ ದಾಸ್ ಶೆಣೈ, ವಿಟ್ಲ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಎಡ್ವಕೇಟ್ ಜಯರಾಮ ರೈ ಉಪಸ್ಥಿತರಿದ್ದರು.
ರಶೀದ್ ವಿಟ್ಲ ಅವರ ಜೊತೆ ಹನೀಫ್ ಕುದ್ದುಪದವು, ಫಾರೂಕ್ ಜುಬೇಲ್, ಸಫ್ವಾನ್ ವಿಟ್ಲ, ಹಾರೀಸ್ ಕೊಡಂಗಾಯಿ ಭಾಗವಹಿಸಿದ್ದರು.