
Advocates Family Vaccinated-ಮಂಗಳೂರಿನಲ್ಲಿ ವಕೀಲರ ಸಂಘದಿಂದ ಬೃಹತ್ ಲಸಿಕಾ ಅಭಿಯಾನ: 500ಕ್ಕೂ ಅಧಿಕ ಮಂದಿಗೆ ಉಚಿತ ಲಸಿಕೆ
ಮಂಗಳೂರು: ಜಿಲ್ಲಾ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ದ.ಕ. ಜಿಲ್ಲಾಡಳಿತದ ಜಂಟಿ ಸಹಯೋಗದಲ್ಲಿ ಮಂಗಳೂರು ವಕೀಲರ ಸಂಘ(ಎಂಬಿಎ) ವತಿಯಿಂದ ಗುರುವಾರ ಬೃಹತ್ ಲಸಿಕಾ ಅಭಿಯಾನ ನಡೆಯಿತು.
ಮಂಗಳೂರಿನ ನ್ಯಾಯಾಲಯ ಸಂಕೀರ್ಣದ ಬಳಿ ಇರುವ ಹಳೆ ಕಟ್ಟಡದಲ್ಲಿ ಮಂಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀ ಮುರಳೀಧರ ಪೈ ಅವರ ಮಾರ್ಗದರ್ಶನದಲ್ಲಿ ಬೃಹತ್ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಮಂಗಳೂರು ನ್ಯಾಯಾಲಯ ಆವರಣದಲ್ಲಿ ನಡೆದ ನಾಲ್ಕನೇ ಯಶಸ್ವೀ ಲಸಿಕಾ ಅಭಿಯಾನ ಇದಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಫಲಾನುಭವಿಗಳು ಲಸಿಕೆ ಪಡೆದುಕೊಂಡರು.
18 ವಯಸ್ಸಿನ ಮೇಲ್ಪಟ್ಟ ವಕೀಲರಿಗೆ, 45 ವರ್ಷ ಮೇಲ್ಪಟ್ಟ ವಕೀಲರಿಗೆ ಈ ಹಿಂದೆ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ವಕೀಲರು ಮಾತ್ರವಲ್ಲದೆ, ಅವರ ಕುಟುಂಬ ಸದಸ್ಯರು ಮತ್ತು ವಕೀಲರ ಕಚೇರಿ ಸಿಬ್ಬಂದಿಗೆ ಲಸಿಕೆ ಪಡೆಯಲು ಅವಕಾಶ ಒದಗಿಸಲಾಗಿತ್ತು.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಲಸಿಕೆ ಸತತವಾಗಿ ಲಸಿಕೆ ನೀಡಲಾಗಿದ್ದು, 500ಕ್ಕೂ ಅಧಿಕ ಮಂದಿ ವಕೀಲರು, ಅವರ ಕುಟುಂಬಸ್ಥರು ಮತ್ತು ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಈ ಲಸಿಕಾ ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅವಿರತವಾಗಿ ಭಾಗವಹಿಸಿದ್ದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಖಜಾಂಚಿ ಅರುಣಾ ಬಿ.ಪಿ., ಜೊತೆ ಕಾರ್ಯದರ್ಶಿ ಶರ್ಮಿಳಾ ಕಾರ್ಯಕ್ರಮದ ನೇತೃತ್ವ ವಹಿಸಿದರು.
ಚಂದ್ರಹಾಸ ಕೊಟ್ಟಾರಿ, ಎಂ.ಎನ್. ವಿನಯ್ ಕುಮಾರ್, ಯುವರಾಜ್ ಅಮೀನ್, ರವಿರಾಜ್ ಶೆಟ್ಟಿ, ಪ್ರಮೋದ್ ಕೆರ್ವಾಶೆ, ವಿಕ್ರಮ್ ಪಡ್ವೆಂತಾಯ, ಟೀನಾ ಶೆಟ್ಟಿ, ಹರೀಶ್, ಪ್ರಮೋದ್ ಕುಮಾರ್, ವಿಜಯ್ ಕುಮಾರ್, ಪ್ರಸಾದ್ ಪೂಜಾರಿ, ಪ್ರೇಂ ಅಂಚನ್, ಸುಕೇಶ್ ಶೆಟ್ಟಿ, ಗಣೇಶ್ ಮೊದಲಾದವರು ಈ ಸಂದರ್ಭದಲ್ಲಿ ಲಸಿಕಾ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿದರು.