
Airport Road- ಮರವೂರು ಸೇತುವೆ ಕುಸಿತ: MSEZ ವಿಶೇಷ ರಸ್ತೆ ಪರ್ಯಾಯವಾಗಿ ಬಳಸಲು ಖಾದರ್ ಆಗ್ರಹ
ಮರವೂರು ಸೇತುವೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಯಾಗಿ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವಂತೆ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಕಟೀಲು ದೇವಸ್ಥಾನ,ಕಿನ್ನಿಗೋಳಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಕುಸಿತಗೊಂಡಿದ್ದು ಬದಲಿ ಸಂಚಾರಕ್ಕಾಗಿ ನೀಡಿದ ಕಾವೂರು-ಕೂಳೂರು-ಕೆಬಿಎಸ್-ಜೋಕಟ್ಟೆ-ಪೊರ್ಕೋಡಿ-ಬಜ್ಪೆ ಅಥವಾ ಪಚ್ಚನಾಡಿ-ಗುರುಪುರ-ಕೈಕಂಬ-ಬಜ್ಪೆ ರಸ್ಥೆಯು ತೀರಾ ಕಿರಿದಾಗಿದ್ದು ಅಲ್ಲದೆ ಜೋಕಟ್ಟೆಯಲ್ಲಿ ರೈಲ್ವೇ ಗೇಟ್ ಕೂಡಾ ದಾಟಬೇಕಾಗಿರುವುದರಿಂದ ವಿಪರೀತ ಸಂಚಾರ ದಟ್ಟಣೆಯಿಂದಾಗಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಪರ್ಯಾಯ ರಸ್ಥೆಯಾಗಿ (MSEZ) ಕೂಳೂರು-ಕಳವಾರು-ಬಜಪೆ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಆಗ್ರಹಿಸಿದರು.
ಅದೇ ರೀತಿ ಆದಷ್ಟು ಬೇಗನೇ ಮರವೂರು ಸೇತುವೆಯ ದುರಸ್ಥಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಮತ್ತೆ ಮರವೂರು ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗುವಂತೆ ಕ್ರಮ ಕೈಗೊಳ್ಳಬೇಕಾಗಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.