Vaccination in Alvas - ಆಳ್ವಾಸ್‍ನಲ್ಲಿ ಕೋವಿಶೀಲ್ಡ್ ಲಸಿಕಾ ಅಭಿಯಾನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಕೋವಿಶೀಲ್ಡ್ ಲಸಿಕಾ ಅಭಿಯಾನವನ್ನು ನಡೆಸಲಾಯಿತು.
ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ಈ ಅಭಿಯಾನವನ್ನು ಮೂಡುಬಿದಿರೆ-ಮುಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಉದ್ಘಾಟಿಸಿದರು.
ಎರಡನೇ ದಿನ ನಡೆದ ಅಭಿಯಾನದ ಭಾಗವಾಗಿ ಮೂಡುಬಿದಿರೆಯ ಸಾರ್ವಜನಿಕರಿಗೆ ಲಸಿಕೆಯನ್ನು ವಿತರಿಸಲಾಯಿತು. ಸುಮಾರು 800 ಕ್ಕೂ ಅಧಿಕ ಜನ ಕೋವಿಶೀಲ್ಡ್ ಲಸಿಕೆಯನ್ನು ಪಡೆದರು.
ಮೊದಲ ಹಂತದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸುಮಾರು 500 ಸಿಬ್ಬಂದಿಗಳನ್ನು ವ್ಯಾಕ್ಸಿನೇಟ್ ಮಾಡಲಾಗಿದೆ. ಪ್ರತಿವಾರ ವ್ಯಾಕ್ಸಿನೇಶನ್ ಪ್ರಕ್ರಿಯೆ ನಡೆಯಲಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
ಸಾರ್ವಜನಿಕರು ಕೋವಿನ್ ವೆಬ್ ಸೈಟ್ ನಲ್ಲಿ ಹಾಗೂ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಎರಡನೇ ದಿನದ ಲಸಿಕೆ ಅಭಿಯಾನದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಫಿಸಿಶಿಯನ್ಸ್, ನರ್ಸಿಂಗ್ ಸ್ಟಾಫ್, ಇಂಟರ್ನಿಗಳು ವೈದ್ಯಕೀಯ ಸೇವೆ ಒದಗಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಲಸಿಕೆ ಅಭಿಯಾನದ ಪರಿವೀಕ್ಷಣೆ ಮಾಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿಯಾನದಲ್ಲಿ ಭಾಗವಹಿಸಿದ್ದರು.