
ambulance driver- ತನ್ನ ಮಗು ಜೀವನ್ಮರಣ ಹೋರಾಟ ಮಾಡುತ್ತಿದ್ದರೂ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಕರ್ತವ್ಯ ಪ್ರಜ್ಞೆ ಮೆರೆದ ಚಾಲಕ
ಮೈಸೂರು: ತನ್ನ ಮಗು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರೂ ಆಂಬುಲೆನ್ಸ್‌ನಲ್ಲಿದ್ದ ರೋಗಿಯನ್ನು ಆಸ್ಪತ್ರೆ ಸೇರಿಸುವ ಮೂಲಕ ಯುವ ಆಂಬುಲೆನ್ಸ್ ಚಾಲಕರೊಬ್ಬರು ಅಪರೂಪದ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದ್ದು, ಗೌಸಿಯಾ ನಗರ ನಿವಾಸಿ 25 ವರ್ಷ ವಯಸ್ಸಿನ ಮುಬಾರಕ್ ಅವರ ಕರ್ತವ್ಯ ಪ್ರಜ್ಞೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ವಿನ ಮೈಮೇಲೆ ಬಿಸಿನೀರು ಬಿದ್ದು, ಮಗು ಗಂಭೀರವಾಗಿದ್ದರೂ, ತನ್ನ ಆಂಬುಲೆನ್ಸ್ ನಲ್ಲಿದ್ದ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೂಲಕ ಆಂಬುಲೆನ್ಸ್ ಚಾಲಕ 25 ವರ್ಷ ವಯಸ್ಸಿನ ಮುಬಾರಕ್ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಮುಬಾರಕ್ ಅವರು ಟೆಂಪೊ ಟ್ರಾವಲ್ಲರ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಲಾಕ್‌ಡೌನ್ ನಂತರ ಆ ಕೆಲಸ ಕೈಕೊಟ್ಟಿತ್ತು. ಆಗ, ಬಿಜೆಪಿ ವತಿಯಿಂದ ನೀಡಲಾದ ಉಚಿತ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸ ತೊಡಗಿದ್ದರು.
ಜೂನ್ 11ರಂದು ಮುಬಾರಕ್ ಅವರ ಎರಡು ವರ್ಷದ ಮಗು ಸೈಯದ್ ಇಬ್ರಾಹಿಂ ಮನೆಯಲ್ಲಿ ಆಟ ಆಡುತ್ತಿರುವಾಗ ಸ್ನಾನಕ್ಕಾಗಿ ಆಗ ತಾನೆ ಹಂಡೆಯಿಂದ ಬಕೆಟ್ ಗೆ ತೆಗೆದಿರಿಸಿದ್ದ ಬಿಸಿ ನೀರನ್ನು ತನ್ನ ಮೇಲೆ ಚೆಲ್ಲಿಕೊಂಡು ಗಂಭೀರವಾಗಿ ಗಾಯಗೊಂಡಿತು. ಕೂಡಲೇ ಮಗುವನ್ನು ಇವರು ನಗರದ ಕೆ. ಆರ್. ಆಸ್ಪತ್ರೆಗೆ ದಾಖಲಿಸಿದ್ದರು.
ಸಾವು ಬದುಕಿನ ಮಧ್ಯೆ ತನ್ನ ಮಗು ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಕರೆ ಬಂದ ತಕ್ಷಣ ಅವರು ರೋಗಿಯ ಅಗತ್ಯಕ್ಕೆ ಸ್ಪಂದಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಸಿಗ್ಮಾ ಆಸ್ಪತ್ರೆಯಲ್ಲಿ ಇದ್ದ ರೋಗಿಯೊಬ್ಬರನ್ನು ಚಾಮರಾಜನಗರಕ್ಕೆ ತನ್ನ ಆಂಬುಲೆನ್ಸ್‌ನಲ್ಲಿ ಸೋಮವಾರ ರಾತ್ರಿ 9:30ಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ದುರದೃಷ್ಟವಶಾತ್ ಮಂಗಳವಾರ ನಸುಕಿನ ಹೊತ್ತಿಗೆ ಮುಬಾರಕ್ ವಾಪಸ್ ಬರುವಷ್ಟರಲ್ಲಿ ಅವರ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತ್ತು.