-->
Textile shop- ನಿಕ್ಕರ್ ಹರಿದುಹೋಗಿದೆ, ಬಟ್ಟೆ ಅಂಗಡಿ ತೆರೆಸಿ : ಸಿಎಂಗೆ ಬಂತು ವಿಚಿತ್ರ ಪತ್ರ!!

Textile shop- ನಿಕ್ಕರ್ ಹರಿದುಹೋಗಿದೆ, ಬಟ್ಟೆ ಅಂಗಡಿ ತೆರೆಸಿ : ಸಿಎಂಗೆ ಬಂತು ವಿಚಿತ್ರ ಪತ್ರ!!





ಮೈಸೂರು: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಅಗತ್ಯ ವಸ್ತುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಿತ್ತು. ಆದರೆ, ವ್ಯಕ್ತಿಯೊಬ್ಬರು ಬಟ್ಟೆಯಂಗಡಿ ತೆರೆಸಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮಾಡಿರುವ ಮನವಿ ಇದೀಗ ವ್ಯಾಪಕ ಚರ್ಚೆಗೀಡಾಗಿದೆ.


ಮೈಸೂರು ಮೂಲದ ನಾಗರಿಕರೊಬ್ಬರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, ಈ ಪತ್ರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.


'ನನ್ನ ಬಳಿ ಇರುವ ಎರಡೂ ಒಳ ಉಡುಪುಗಳು ಹರಿದು ಹೋಗಿವೆ. ಹೀಗಾಗಿ ತಿಂಗಳಲ್ಲಿ ಅಥವಾ ವಾರಕ್ಕೆ ಒಂದು ಬಾರಿಯಾದರೂ ಬಟ್ಟೆ ಅಂಗಡಿ ತೆರೆಸಿ' ಎಂದು ಮನವಿ ಮಾಡಿಕೊಂಡಿದ್ದಾರೆ.


ಮೈಸೂರಿನ ಚಾಮರಾಜಪುರದ ಕೊ.ಸು.ನರಸಿಂಹಮೂರ್ತಿ ಈ ಪತ್ರವನ್ನು ಬರೆದವರು. ಮಾಧ್ಯಮದಲ್ಲಿ ಈ ಪತ್ರ ವರದಿಯಾಗಿದೆ.


ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸಬಹುದು. ಆದರೆ ಪರಿಸ್ಥಿತಿಯನ್ನು ಒಮ್ಮೆ ನೀವು ಅವಲೋಕನೆ ಮಾಡಿ. ಕಳೆದ ಸುಮಾರು ಎರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳಿಗೆ ತೆರೆಯುವ ಭಾಗ್ಯ ಸಿಕ್ಕಿದೆ. ಆದರೆ, ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಎಂದು ನಿಮಗೆ ತಿಳಿದಿದೆಯೇ? ಎಂದು ಅವರು ಪ್ರಶ್ನಿಸಿದರು.


ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿದು ಚಿಂದಿಯಾಗಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ಯಾರ ಹತ್ತಿರವೂ ಹೇಳುವುದು ನಮ್ಮ ಈ ಕಷ್ಟ... ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.


ನಿಮಗೆ ಜನರ ಅಂತರಾಳದ ಕಷ್ಟ ತಿಳಿದರೆ ಸಾಕು. ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ ಎಂದು ಪತ್ರದಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article