Couple Died due to financial crisis- ಚಿಟ್ ವ್ಯವಹಾರ ತಂದ ಸಂಕಷ್ಟ: ಸಾಲಗಾರರ ಕೋಟಲೆ, ದಂಪತಿ ಆತ್ಮಹತ್ಯೆ
ಮಂಗಳೂರಿನ ಹೃದಯಭಾಗದಲ್ಲಿ ಇರುವ ಕದ್ರಿ ಪಿಂಟೋಸ್ ಲೇನ್ ನಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು 62 ವರ್ಷದ ಸುರೇಶ್ ಶೆಟ್ಟಿ ಮತ್ತು ಅವರ ಪತ್ನಿ ವಾಣಿ 55 ಎಂದು ಗುರುತಿಸಲಾಗಿದೆ.
ಚೀಟಿ ವ್ಯವಹಾರದಲ್ಲಿ ಸಂಭವಿಸಿದ ಹಣಕಾಸಿನ ಬಿಕ್ಕಟ್ಟಿನಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ಧಾರೆ. ಪತಿ ಸುರೇಶ್ ಶೆಟ್ಟಿ ಅವರು ಸಣ್ಣ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಜೊತೆಗೆ ಪ್ರಖ್ಯಾತ ತಬಲಾ ಕಲಾವಿದರೂ ಆಗಿದ್ದಾರೆ. ವಿವಿಧ ಸಂಗೀತ ಗೋಷ್ಟಿಗಳಲ್ಲಿ, ದೇವಸ್ಥಾನಗಳಲ್ಲಿ ಅವರು ಸಂಗೀತ ಕಚೇರಿಗೆ ತಬಲಾ ಸಾಥ್ ನೀಡುತ್ತಿದ್ದರು. ಪತ್ನಿ ವಾಣಿ ಖಾಸಗಿ ಕಾಲೇಜೊಂದರಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಚೀಟಿ ವ್ಯವಹಾರ, ಸಾಲದ ಹೊರೆ, ಸಾಲಗಾರರ ಕಿರಿಕಿರಿಯಿಂದ ಬೇಸತ್ತು ಮಾನಸಿಕ ಕ್ಷೋಭೆಯಿಂದ ಪತ್ನಿ ವಾಣಿ ಶೆಟ್ಟಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಗಮನಕ್ಕೆ ಬರುತ್ತಿದ್ದಂತೆ ಪತಿ ಸುರೇಶ್ ಶೆಟ್ಟಿ ಅವರು ಮನೆಯ ಎದುರಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿ ಚಿಟ್ ಫಂಡ್ ವ್ಯವಹಾರವನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಈ ವ್ಯವಹಾರಕ್ಕೆ ಭಾರೀ ದೊಡ್ಡ ಪೆಟ್ಟು ಬಿದ್ದಿತ್ತು. ಚಿಟ್ ಪಡೆದುಕೊಂಡಿದ್ದವರು ತಮ್ಮ ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿರಲಿಲ್ಲ. ಇದರಿಂದ ಹಣ ನೀಡಬೇಕಾದವರಿಗೆ ಸೂಕ್ತ ಸಮಯದಲ್ಲಿ ನೀಡಲು ಆಗುತ್ತಿರಲಿಲ್ಲ. ಇದರಿಂದ ಸಾಲದ ಹೊರೆ ತಲೆಮೇಲೆ ಬಂದಿತ್ತು. ಸಾಲಗಾರರ ಕಿರಿಕಿರಿ ಹೆಚ್ಚಾಯಿತು. ಇದರಿಂದ ದಂಪತಿ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆ, ಆಘಾತಕ್ಕೆ ಒಳಗಾಗಿದ್ದರು ಎಂದು ಕುಟುಂಬದ ಸಮೀಪವರ್ತಿಗಳು ಹೇಳಿದ್ದಾರೆ.
ಆತ್ಮಹತ್ಯೆ ನಿರ್ಧಾರಕ್ಕೆ ಮುನ್ನ ವಾಣಿ ಶೆಟ್ಟಿ ಡೆತ್ ನೋಟ್ ಬರೆದಿಟ್ಟಿದ್ದು, ಚಿಟ್ ಫಂಡ್ ವ್ಯವಹಾರದಲ್ಲಿ ಉಂಟಾದ ಆರ್ಥಿಕ ನಷ್ಟ, ಸಾಲಗಾರರ ಬಾಧೆಯಿಂದ ಈ ಕಠಿಣ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ದಂಪತಿಯ ಪುತ್ರನ ಜೊತೆ ಮಾತುಕತೆ ನಡೆಸಿದ್ದು, ಮಾನಸಿಕ ಆಘಾತಕ್ಕೆ ಒಳಗಾಗಿರುವ ಪುತ್ರನಿಗೆ ಸಾಂತ್ವನ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್ ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಪರಿಸ್ಥಿತಿ ಬಹುತೇಕ ಕುಟುಂಬಗಳಿಂದ ಆರ್ಥಿಕ ಮುಗ್ಗಟ್ಟು ತಂದಿಟ್ಟಿದೆ. ಆರ್ಥಿಕ ಸಂಕಷ್ಟ ಇದ್ದರೆ ತಕ್ಷಣ ಪೊಲೀಸರಿಗೆ ಹೇಳಬಹುದಿತ್ತು. ಕಾನೂನಿನ ಚೌಕಟ್ಟಿನಲ್ಲಿ ಆರ್ಥಿಕ ವ್ಯವಹಾರವನ್ನು ಬಗೆಹರಿಸಲು ಪ್ರಯತ್ನಿಸಬಹುದಿತ್ತು. ಅದರ ಬದಲು ಈ ರೀತಿ ಮಾಡಿದ್ದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ.