![CSR Fund- CSR ಫಂಡ್ ದೇಣಿಗೆ ನೀಡದ ಕಂಪೆನಿಗಳ ವಿರುದ್ಧ ಕ್ರಮ : ಬಾಂಬೆ ಹೈಕೋರ್ಟ್ ನಿರ್ದೇಶನ CSR Fund- CSR ಫಂಡ್ ದೇಣಿಗೆ ನೀಡದ ಕಂಪೆನಿಗಳ ವಿರುದ್ಧ ಕ್ರಮ : ಬಾಂಬೆ ಹೈಕೋರ್ಟ್ ನಿರ್ದೇಶನ](https://blogger.googleusercontent.com/img/b/R29vZ2xl/AVvXsEiu1euLGp-0VeQXCsNca8MedZHw2xhQLDTXpmRqp51mpjZsbXw7BFEHIvOXYxhFR07PKLWMvd2bGCQ1A18Q4urFtwHz-drDZRwNCzO5zkbpRv2WBwUkSJitR4JmdgNHumU8VhdAoEvk2CY/w640-h428/Judge.jpg)
CSR Fund- CSR ಫಂಡ್ ದೇಣಿಗೆ ನೀಡದ ಕಂಪೆನಿಗಳ ವಿರುದ್ಧ ಕ್ರಮ : ಬಾಂಬೆ ಹೈಕೋರ್ಟ್ ನಿರ್ದೇಶನ
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಾದ ಔಷಧ ಉತ್ಪಾದನೆಗೆ ತುರ್ತು ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಕೋವಿಡ್ ನಿರ್ವಹಣೆಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿ ಅಡಿ ನೆರವು ನೀಡಲು ಮುಂದಾಗದ ಕಂಪೆನಿಗಳ ವಿರುದ್ಧ ಶಾಸನಬದ್ಧ ನಿಬಂಧನೆಗಳ ಅಡಿ ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ನಾಗಪುರ ಪೀಠ ಸರ್ಕಾರಿ ಅಧಿಕಾರಿಗಳಿಗೆ ಆದೇಶಿಸಿದೆ.
(ನ್ಯಾಯಾಲಯ ತನ್ನದೇ ನಿಲುವಳಿ Vs ಭಾರತ ಸರ್ಕಾರ).
ನಾಗಪುರದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ದಾಖಲಿಸಿಕೊಂಡ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್ ಬಿ ಶುಕ್ರೆ ಮತ್ತು ಎ ಜಿ ಘರೋಟೆ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸಿಎಸ್‌ಆರ್ ನಿಧಿಯಡಿ ಕಂಪೆನಿಗಳು ಕೋವಿಡ್ ನಿರ್ವಹಣೆಗೆ ದೇಣಿಗೆ ನೀಡಲು ಹಿಂದೇಟು ಹಾಕುತ್ತಿವೆ ಎಂಬುದನ್ನು ವಿಭಾಗೀಯ ಆಯುಕ್ತರು ಪೀಠದ ಗಮನಕ್ಕೆ ತಂದರು.
ದೇಣಿಗೆ ನೀಡಲು ಒಲವು ತೋರದ ಮತ್ತು ವಿಫಲವಾಗುವ ಸಂಸ್ಥೆಗಳ ವಿರುದ್ಧ ಕಂಪೆನಿಗಳ ಕಾಯಿದೆ 2013 ರ ನಿಬಂಧನೆಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಅದರ ಅಡಿ ಶಾಸನಬದ್ಧ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳುವಂತೆ ನಾಗಪುರ, ಅಮರಾವತಿಯ ವಿಭಾಗೀಯ ಆಯುಕ್ತರು ಮತ್ತು ಇತರೆ ಜಿಲ್ಲಾ ದಂಡಾಧಿಕಾರಿಗಳಿಗೆ ಸೂಚನೆ ನೀಡಿತು.
ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಇದಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ಒಳಗೆ ಅಗತ್ಯಬಿದ್ದರೆ ವಿಸ್ತೃತ ಆದೇಶ ಹೊರಡಿಸುವುದಾಗಿ ಪೀಠ ಹೇಳಿದೆ.
ಕಪ್ಪು ಶಿಲೀಂದ್ರ ಚಿಕಿತ್ಸೆಗೆ ಅಗತ್ಯವಾದ ಔಷಧ ಕೊರತೆ ಇದೆ ಎಂಬುದನ್ನು ಪರಿಗಣಿಸಿದ ನ್ಯಾಯಾಲಯವು ಔಷಧ ಉತ್ಪಾದನೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಸೋಂಕು ಎಂದು ಪರಿಗಣಿತವಾಗಿರುವ ಬ್ಲ್ಯಾಕ್ ಫಂಗಸ್ ಅನ್ನು ನಿಯಂತ್ರಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಭಾರತದಲ್ಲಿ ಇದು ಗಂಭೀರವಾದ ಸಾಂಕ್ರಾಮಿಕತೆಯ ರೂಪ ಪಡೆಯುವ ಸಾಧ್ಯತೆ ಇದೆ ಎಂದು ಪೀಠ ಹೇಳಿದೆ.
ಇದು ಯುದ್ಧ ಕಾಲದಂತಹ ಪರಿಸ್ಥಿತಿ ಎಂದಿರುವ ನ್ಯಾಯಾಲಯವು ಈ ಅಹವಾಲುಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯೆಸಬಹುದು ಎಂಬ ಭರವಸೆ ವ್ಯಕ್ತಪಡಿಸಿತು.