D K Shivakumar: ಹೆಣದಲ್ಲೂ, ಔಷಧಿಯಲ್ಲೂ ಭಾರೀ ಲೂಟಿ: ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ದಯನೀಯ ವೈಫಲ್ಯ ಕಂಡಿದೆ. ಇದೇ ವೇಳೆ, ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲೂ ಸರ್ಕಾರ ವಿಫಲವಾಗಿದ್ದು, ಜನರ ಮೇಲೆ ಇನ್ನಿಲ್ಲದ ಹೊರೆ ಬಿದ್ದಿದೆ. ಬದುಕು ಸಂಕಷ್ಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಶವ ಸಂಸ್ಕಾರ ಮಾಡುವುದಕ್ಕೂ ಸರದಿಯ ಸಾಲಿನಲಲ್ಲಿ ನಿಲ್ಲಬೇಕು, ಆಸ್ಪತ್ರೆಗೆ ಸೇರಲೂ ಸಾಲು ನಿಲ್ಲಬೇಕು, ಔಷಧಿ ಪಡೆಯಲು, ಲಸಿಕೆ ಹಾಕಿಸಿಕೊಳ್ಳಲೂ ಲೈನ್ ನಿಲ್ಲಬೇಕು. ಇಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದ್ದೇ ಸರ್ಕಾರ ಎಂದು ಅವರು ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದರು.
ಜನ ಬಿಜೆಪಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದರೆ, ಅವರು ಮಾತ್ರ ಎಲ್ಲದ್ದಕ್ಕೂ ಪ್ರತಿಪಕ್ಷಗಳು ಕಾರಣ ಎಂದು ಓಡಾಡುತ್ತಿದ್ದಾರೆ. ಲಾಕ್‌ಡೌನ್ ಸೇರಿದಂತೆ ಎಲ್ಲ ವ್ಯವಸ್ಥೆಗಳಿಗೂ ನಾವು ಸರ್ಕಾರಕ್ಕೆ ವಿಷಯಬದ್ಧ ಬೆಂಬಲ ನೀಡಿದ್ದೇವೆ. ಆದರೆ, ಅವರು ಎಲ್ಲದರಲ್ಲೂ ಹಣ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.