
A Human Story - ಕೆನರಾ ಬ್ಯಾಂಕ್ ಬಲವಂತದ ವಸೂಲಿ?: ಒಬ್ಬ ಆಟೋ ಚಾಲಕನ ಕಣ್ಣೀರ ಕಥೆ ಇದು...
ಮಂಗಳೂರಿನ ಸುರತ್ಕಲ್ ನ ಆಟೋ ಚಾಲಕ ಬಶೀರ್ ಎಂಬವರು ಕೆನರಾ ಬ್ಯಾಂಕ್ ನಿಂದ ಮನೆ ಸಾಲ ಪಡೆದಿದ್ದರು. ಪ್ರತಿ ತಿಂಗಳು ಇದರ ಕಂತು ಸುಮಾರು 13,000 ರೂಪಾಯಿ ಆಗುತ್ತಿತ್ತು. ಒಂದು ದಿನವೂ ವ್ಯತ್ಯಾಸ ಆಗದಂತೆ ಬಶೀರ್ ಏನೋನೊ ಕಸರತ್ತು ನಡೆಸಿ ಕಂತು ತುಂಬುತ್ತಿದ್ದರು. ಕೊರೋನ ಪ್ರಥಮ ಅಲೆಯ ಲಾಕ್ ಡೌನ್ ಸಂದರ್ಭ ಕಂತು ಕಟ್ಟಲು ಒಂದೆರಡು ತಿಂಗಳು ವಿನಾಯತಿ ಸಿಕ್ಕಿದ್ದರೂ, ಲಾಕ್ ಡೌನ್ ತರುವಾಯ ಬಾಕಿ ಕಂತುಗಳನ್ನು ಕೆನರಾ ಬ್ಯಾಂಕ್ ಬಲವಂತವಾಗಿ ವಸೂಲಿ ಮಾಡಿತ್ತು.
ಈ ಬಾರಿಯ ಲಾಕ್ ಡೌನ್ ಸಂದರ್ಭ ಮತ್ತೆ ದುಡಿಮೆಗೆ ಕುತ್ತು ಬಂದಾಗ ಬಶೀರ್ ತಾನು ಸಾಲ ಪಡೆದಿದ್ದ ಕೆನರಾ ಬ್ಯಾಂಕಿನ ಅಧಿಕಾರಿಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ಕಂತು ಪಾವತಿಸುವುದು ಅಸಾಧ್ಯ. ಕಂತು ಪಾವತಿಗೆ ಒಂದಿಷ್ಟು ಸಮಯಾವಕಾಶ ನೀಡುವಂತೆ ವಿನಂತಿಸಿದ್ದಾರೆ. ಪತ್ರವನ್ನೂ ನೀಡಿದ್ದಾರೆ. ಆದರೆ ಬ್ಯಾಂಕ್ ಆಡಳಿತದ ಮನ ಕರಗಲಿಲ್ಲ. ಈ ಸಂದರ್ಭ ಬಡಪಾಯಿ ಬಶೀರ್ ಖಾತೆಯಲ್ಲಿ 2728 ರೂಪಾಯಿ ದುಡ್ಡಿತ್ತು. ಒಂದು ಮಧ್ಯ ರಾತ್ರಿ ಈ ಚಿಲ್ಲರೆ ಹಣವನ್ನು ಪೂರ್ತಿಯಾಗಿ ಬ್ಯಾಂಕ್ ಬಾಕಿ ಮನೆ ಸಾಲಕ್ಕಾಗಿ ಜಮಾ ಮಾಡಿಕೊಂಡಿತು. ಅಲ್ಲಿಗೆ ಬಶೀರ್ ಬ್ಯಾಂಕ್ ಖಾತೆ 00.00 ಗೆ ಇಳಿಯಿತು.
ಇದಾಗಿ ಕೆಲ ದಿನಗಳಲ್ಲಿ ಬಶೀರ್ ಆಟೋ ಚಾಲಕರಿಗೆ ರಾಜ್ಯ ಸರಕಾರದ ಕೋವಿಡ್ ಲಾಕ್ ಡೌನ್ ಪರಿಹಾರವಾಗಿ ಕೊಡುವ ಮೂರು ಸಾವಿರ ರೂಪಾಯಿಗಾಗಿ ಅರ್ಜಿ ಸಲ್ಲಿಸಿದರು. ಅಷ್ಟು ಹೊತ್ತಿಗೆ ಅವರ ಆಟೋ ರಿಕ್ಷಾ ಬ್ಯಾಟರಿ ನಿಷ್ಕ್ರಿಯ ಗೊಂಡಿತ್ತು. ಎರಡೂವರೆ ಸಾವಿರ ರೂಪಾಯಿ ಸಾಲ ಮಾಡಿ ಬ್ಯಾಟರಿ ಹಾಕಿಸಿದ ಬಶೀರ್ ಸರಕಾರದಿಂದ ಮೂರು ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ಬಿದ್ದ ತಕ್ಷಣ ಸಾಲ ತೀರಿಸುವ ನಿರೀಕ್ಷೆಯಲ್ಲಿ ಇದ್ದರು.
ನಿರೀಕ್ಷೆಯಂತೆ ನಿನ್ನೆ ಮಧ್ಯರಾತ್ರಿ ಸರಕಾರದ ಕೋವಿಡ್ ಪರಿಹಾರ ಹಣ ರೂಪಾಯಿ ಮೂರು ಸಾವಿರ ಬಶೀರ್ ಬ್ಯಾಂಕ್ ಖಾತೆಗೆ ಬಿತ್ತು. ಬಿದ್ದ ತಕ್ಷಣವೇ ಅದೇ ಕಾಳ ರಾತ್ರಿಯಲ್ಲಿ ಕೆನರಾ ಬ್ಯಾಂಕ್ ಪೂರ್ತಿ ಮೂರು ಸಾವಿರ ರೂಪಾಯಿಯನ್ನು ಬಶೀರರ ಮನೆ ಸಾಲ ಕಂತಿಗೆ ಜಮಾ ಮಾಡಿಕೊಂಡಿತು. ಅಲ್ಲಿಗೆ ಮತ್ತೆ ಬಶೀರ್ ಬ್ಯಾಂಕ್ ಖಾತೆ 00.00 ಗೆ ತಲುಪಿತು. ಮುಂಜಾನೆ ಎದ್ದು ಮೊಬೈಲ್ ಸಂದೇಶದಲ್ಲಿ ಈ ಕಾಳ ರಾತ್ರಿ ಕಾರ್ಯಾಚರಣೆಯನ್ನು ಕಂಡ ಬಶೀರ್ ಆಘಾತಗೊಂಡಿದ್ದಾರೆ."
ಈ ಬೆಳವಣಿಗೆಗಳನ್ನು ನನ್ನೊಡನೆ ಹಂಚಿಕೊಂಡು ದುಃಖ ತೋಡಿಕೊಂಡ ಬಶೀರ್ ಕೊನೆಯಲ್ಲಿ ಹೇಳಿದ್ದು ಇಷ್ಟು. "ಅಟೋ ಓಡಿಸಿ ಮನೆ ಕಟ್ಟುವುದು ನಮ್ಮಂತವರಿಗೆ ದೂರದ ಕನಸು. ಮಕ್ಕಳು ಇನ್ನೇನು ದುಡಿಮೆ ಮಾಡುವಷ್ಟು ದೊಡ್ಡವರಾಗುತ್ತಾರೆ ಎಂಬ ಹುಂಬ ಧೈರ್ಯದಲ್ಲಿ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿದೆ. ಕೊರೋನ ಸೋಂಕಿನ ನಂತರ ಕಳೆದ ಒಂದು ವರ್ಷದಿಂದ ಹದಿಹರೆಯದ ಇಬ್ಬರು ಗಂಡು ಮಕ್ಕಳೂ ಸರಿಯಾದ ಉದ್ಯೋಗವಿಲ್ಲದೆ ಮನೆಯಲ್ಲಿದ್ದಾರೆ. ಆಟೋ ಓಡಿಸಿ, ಏನೇನೊ ದುಡಿಮೆ ಮಾಡಿ ಮನೆ ಸಾಲದ ಕಂತು ಕಟ್ಟಿ, ಮನೆ ನಿಭಾಯಿಸಿ ಹೈರಾಣಾಗಿ ಹೋಗಿದ್ದೇನೆ. ಈಗ ಲಾಕ್ ಡೌನ್ ನಿಂದಾಗಿ ಕುಟುಂಬದ ಹಸಿವು ತಣಿಸುವುದೆ ಕಷ್ಟ. ಅದರ ಮಧ್ಯೆ ಬ್ಯಾಂಕ್ ಸಾಲ ಕಟ್ಟುವುದು ಹೇಗೆ ? ಸರಕಾರವೇ ಹೇರಿದ ಲಾಕ್ ಡೌನ್, ಆದುದರಿಂದ ಒಂದು ನಾಲ್ಕು ತಿಂಗಳು ಸಾಲದ ಕಂತಿನ ಅವಧಿ ವಿಸ್ತರಿಸಿದ್ದರೆ ಹೇಗೋ ನಿಭಾಯಿಸುತ್ತಿದ್ದೆ. ಬ್ಯಾಂಕ್ ನವರು ನೋಡಿದರೆ ನನ್ನ ಖಾತೆಯಲ್ಲಿ ಐದು ರೂಪಾಯಿ ಸಹ ಉಳಿಸಲು ಬಿಡುತ್ತಿಲ್ಲ. ಸರಕಾರವೇ ಹಸಿವಿನ ಪರಿಹಾರ ಎಂದು ನೀಡಿದ ಮೂರು ಸಾವಿರ ರೂಪಾಯಿಯನ್ನೂ ರಾತ್ರೆಯ ಕತ್ತಲಿನಲ್ಲಿ ಕಿತ್ತು ಕೊಂಡಿದ್ದಾರೆ. ಇನ್ನು ಕಂತು ಬಾಕಿ, ಎಕೌಂಟ್ 0 ಬ್ಯಾಲೆನ್ಸ್ ಅಂತ ದಂಡವನ್ನೂ ಹಾಕುತ್ತಾರೆ. ನನಗೀಗ 49 ವರ್ಷ. ದೇಹದಲ್ಲಿ ಹಿಂದಿನ ಕಸುವಿಲ್ಲ. ಹೀಗೆ ಕ್ರೂರವಾಗಿ ನಡೆದು ಕೊಂಡರೆ ನಮ್ಮಂಥವರ ಕುಟುಂಬ ಬದುಕುವುದು ಹೇಗೆ ?"
ಇದು ಬಶೀರ್ ಒಬ್ಬರ ಕತೆಯಲ್ಲ. ಇದು ಸಂವೇದನಾ ಶೂನ್ಯ ವ್ಯವಸ್ಥೆ ನಡೆದುಕೊಳ್ಳುವ ರೀತಿ. ಈ ಸರಕಾರ ನಡೆಸುವವರಿಗೂ ಡಕಾಯತಿ ನಡೆಸುವವರಿಗೂ ಯಾವ ವ್ಯತ್ಯಾಸವೂ ಇಲ್ಲ.
ಬರಹ: ಮುನೀರ್ ಕಾಟಿಪಳ್ಳ