Jithin Prasada joins BJP- ಕಾಂಗ್ರೆಸ್‌ಗೆ ಮತ್ತೊಂದು ಆಘಾತ: ಹಿರಿಯ ನಾಯಕ ಜಿತಿನ್ ಪ್ರಸಾದ ಕಮಲ ಪಾಳಯಕ್ಕೆ
ನವದೆಹಲಿ: ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಕಾಂಗ್ರೆಸ್ ನ ಮತ್ತೊಬ್ಬ ಜನಪ್ರಿಯ ಯುವ ನಾಯಕ ಜಿತಿನ್ ಪ್ರಸಾದ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತೊಂದು ಆಘಾತ ಅನುಭವಿಸಿದೆ.
ಜಿತಿನ್ ಅವರು ಹಿರಿಯ ನಾಯಕ ಜಿತೇಂದ್ರ ಪ್ರಸಾದ್ ಅವರ ಪುತ್ರ. ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಣಿಸಿದ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿತಿನ್ ಪ್ರಸಾದ ಸೇರ್ಪಡೆ ಕೇಸರಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲುನಿ ಸಮ್ಮುಖದಲ್ಲಿ ಜಿತಿನ್ ಪ್ರಸಾದ ದೆಹಲಿಯಲ್ಲಿಂದು ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರೀಯ ಪಕ್ಷ ಅಂತ ಇದ್ದರೆ ಅದು ಬಿಜೆಪಿ ಮಾತ್ರ, ಉಳಿದ ಪಕ್ಷಗಳೆಲ್ಲಾ ಕೆಲವು ಜನರಿಗೆ ಅಥವಾ ಪ್ರದೇಶಕ್ಕೆ ಸೀಮಿತವಾಗಿದೆ ಎಂದು ಹೇಳಿದರು.
ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಕೆಲಸ ಮಾಡಿ, ನನಗೆ ನಾಯಕನಾಗಿ ಬೆಳೆಯಲು ಸಹಕರಿಸಿದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು. ಇನ್ನು ಮುಂದೆ ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತೇನೆ, ಜನರಿಗೆ ಸಹಾಯ ಮಾಡಬೇಕೆಂದರೆ, ಕೆಲಸ ಮಾಡಬೇಕೆಂದರೆ ಬಿಜೆಪಿಯೇ ಸರಿಯಾದ ಪಕ್ಷ ಎಂಬುದು ನನಗೆ ಮನವರಿಕೆಯಾಗಿದೆ, ಹೀಗಾಗಿ ಬಿಜೆಪಿ ಸೇರಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
47 ವರ್ಷದ ಜಿತಿನ್ ಪ್ರಸಾದ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದವರು. ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯದಿಂದ ಬಂದವರು. ಈ ಹಿಂದೆ ಪಶ್ಚಿಮ ಬಂಗಾಳದ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು.
ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಜಿತಿನ್ ಪ್ರಸಾದ ಸೋಲು ಅನುಭವಿಸಿದ್ದರು. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಈ ಹೊತ್ತಿನಲ್ಲಿ ಬಿಜೆಪಿ ಸೇರ್ಪಡೆಯಾಗಿ ಆ ಪಕ್ಷದಲ್ಲಿ ರಾಜಕೀಯವಾಗಿ ಅವರು ಬೆಳೆಯಲು ಸೂಕ್ತ ನಿರ್ಧಾರ ಎಂದು ವಿಶ್ಲೇಷಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಜನರು ಬಿಜೆಪಿ ಬಗ್ಗೆ ಅಭಿಪ್ರಾಯ ಹೊಂದಿರುವ ಸಂದರ್ಭದಲ್ಲಿ ಪಕ್ಷಕ್ಕೆ ಸಹ ಜಿತಿನ್ ಸೇರ್ಪಡೆ ಧನಾತ್ಮಕ ಅಂಶವೇ ಆಗಿದೆ.
2019ರ ಲೋಕಸಭಾ ಚುನಾವಣೆ ಸಮಯದಲ್ಲೇ ಜಿತಿನ್ ಪ್ರಸಾದ ಕಮಲ ಪಾಳಯ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹರಡಿತ್ತು. ಆಗ ಎಚ್ಚೆತ್ತುಕೊಂಡಿದ್ದ ಕಾಂಗ್ರೆಸ್ ನಾಯಕತ್ವ ಅವರನ್ನು ಪಕ್ಷ ತೊರೆಯದಂತೆ ಮನವೊಲಿಸಿತ್ತು.