
Kerala lockdown relaxed- ಸೋಂಕು ನಿಯಂತ್ರಣ: ಕೇರಳದಲ್ಲಿ ಲಾಕ್‌ಡೌನ್ ಸಡಿಲಿಕೆ, ವಾರಾಂತ್ಯ ನಿರ್ಬಂಧ ಜಾರಿ
ಕೇರಳ ರಾಜ್ಯದಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಂಡ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ(ಗುರುವಾರ)ಯಿಂದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ.
ಈ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಕೇರಳದ ಪಿಣರಾಯಿ ವಿಜಯನ್ ಸರ್ಕಾರ, ವಾರಾಂತ್ಯದ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದೆ.
ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿ ಇರುವುದು. ಮದ್ಯ ಮಾರಾಟ ಮತ್ತು ಬಾರ್‌ಗಳಿಗೆ ಬೆಳಿಗ್ಗೆ 9ರಿಂದ 7 ರವರೆಗೆ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ.
ಆಪ್ ಮೂಲಕ ಸ್ಟಾಕ್ ಬುಕ್ ವ್ಯವಸ್ಥೆ ಮಾಡಬೇಕು, ಅಂಗಡಿ ಮುಂದೆ ಜನ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂಬ ನಿರ್ದೇಶನವನ್ನೂ ನೀಡಲಾಗಿದೆ.
ಎಲ್ಲ ಪರೀಕ್ಷೆಗಳಿಗೆ ಅನುಮತಿ ನೀಡಲಾಗಿದೆ. ವಿವಾಹ ಮತ್ತು ಮರಣಾನಂತರದ ಕಾರ್ಯಕ್ರಮಗಳಿಗೆ 20 ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಗಿದೆ. ಜೂನ್ 17ರಿಂದ ಕನಿಷ್ಟ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಆರಂಭಿಸಬಹುದು ಸರ್ಕಾರ ಸೂಚನೆ ನೀಡಿದೆ.
ಸ್ಥಳೀಯಾಡಳಿತ ಪ್ರದೇಶಗಳಲ್ಲಿ 7 ದಿನಗಳ ಟಿಪಿಆರ್ ಶೇ. 8 ಇದ್ದರೆ ರೋಗ ಕಡಿಮೆ ಇರುವ ಪ್ರದೇಶ ಎಂದು ಪರಿಗಣಿಸಲಾಗುವುದು ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ಧಾರೆ.