
DK Lockdown Details- ದ.ಕ.ದಲ್ಲಿ ಸೋಮವಾರದಿಂದ ಇನ್ನೊಂದು ವಾರ ಸೆಮಿ ಲಾಕ್‌ಡೌನ್: ಡಿಸಿ ಡಾ. ರಾಜೇಂದ್ರ
ಕೋವಿಡ್ ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಜೂನ್ 28ರ ವರೆಗೆ ಸೆಮಿ ಲಾಕ್ ಡೌನ್ ಮಾದರಿಯಲ್ಲಿ ಪರಿವರ್ತನೆಯಾಗಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ಬಳಿಕ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಂದ್ರ ಅವರು, ಲಾಕ್‌ಡೌನ್ ತೆರವು ಕುರಿತಂತೆ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 11ರಂದು ಹೊರಡಿಸಿದ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಹಾಗಾಗಿ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದೆ ಎಂದು ಅವರು ವಿವರ ನೀಡಿದರು.
ಆದರೂ, ದ.ಕ. ಜಿಲ್ಲೆಯಲ್ಲಿ ಸೆಮಿ ಲಾಕ್‌ಡೌನ್ ಮೂಲಕ ಸೋಮವಾರದಿಂದ ಯಾವುದಕ್ಕೆಲ್ಲಾ ವಿನಾಯಿತಿ ನೀಡಬೇಕು ಎಂಬುದರ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಸಂಸದರ ನೇತೃತ್ವದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಕೋವಿಡ್ ನಿಯಂತ್ರಣ ಮತ್ತು ಲಾಕ್‌ಡೌನ್ ಸಡಿಲಿಕೆ ಮಾಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಇನ್ನೊಂದು ವಾರದಲ್ಲಿ ಕಟ್ಟುನಿಟ್ಟಾಗಿ ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಪಾಸಿಟಿವಿಟಿ ದರ ಇಳಿಕೆಯಾಗಲಿದೆ. ಅದರೊಂದಿಗೆ ಕೆಲವು ಅಗತ್ಯ ಸೇವೆಗಳು ಮತ್ತು ನಾಗರಿಕ ಸೌಲಭ್ಯಗಳಿಗೆ ವಿನಾಯಿತಿ ನೀಡುವ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಅವರು ತಿಳಿಸಿದರು.