-->
Model Teacher Suresh Expired- ರಾಜ್ಯದ ಜನಮೆಚ್ಚಿದ ಶಿಕ್ಷಕ ಇನ್ನಿಲ್ಲ: ಚೇಳ್ಯಾರು ಸುರೇಶ್ ಎಸ್.ಎಂ. ನಿಧನ

Model Teacher Suresh Expired- ರಾಜ್ಯದ ಜನಮೆಚ್ಚಿದ ಶಿಕ್ಷಕ ಇನ್ನಿಲ್ಲ: ಚೇಳ್ಯಾರು ಸುರೇಶ್ ಎಸ್.ಎಂ. ನಿಧನ



ಮಂಗಳೂರಿನ ಚೇಳ್ಯಾರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮೇತ್ರಿ ಸುರೇಶ ಸಿದರಾಯ ಆಲಿಯಾಸ್ ಸುರೇಶ್ ಎಸ್.ಎಂ. ಅಲ್ಪ ಕಾಲದ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.





ಚೇಳ್ಯಾರು ಶಾಲೆಯಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಸುರೇಶ್, ರಾಜ್ಯ ಸರ್ಕಾರದ ಪ್ರತಿಷ್ಠಿತ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದರು.


ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಸುರೇಶ್ ಚೇಳ್ಯಾರು ಶಾಲೆಯಲ್ಲಿ ಕಳೆದ 12 ವರ್ಷಗಳಿಂದ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಶಾಲೆಯನ್ನು ಮುನ್ನಡೆಸಿದ್ದರು.



ಒಂದು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ್ದ ಸುರೇಶ್, ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಕ್ರೀಡಾಕೂಟದಲ್ಲಿ ಗಣನೀಯ ಸಾಧನೆ ಮಾಡುವಂತೆ ನೋಡಿಕೊಂಡರು.



ಸದಾ ಹಸನ್ಮುಖಿಯಾಗಿದ್ದ ಸುರೇಶ್, ಸ್ಥಳೀಯವಾಗಿಯೂ ಎಲ್ಲ ಕಾರ್ಯಕ್ರಮಗಳಲ್ಲಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡವರು.


ಬಿಜಾಪುರದ ಇಂಡಿ ತಾಲೂಕಿನ ನಿವಾಸಿಯಾಗಿದ್ದ ಸುರೇಶ್, ಪತ್ನಿ, ಓರ್ವ ಮಗ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.


ಬಾಲ್‌ ಬ್ಯಾಡ್ಮಿಂಟನ್, ಕಬಡ್ಡಿ, ಖೋ ಖೋ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ವಿಶೇಷ ಪರಿಣತಿ ಪಡೆದಿರುವ ಸುರೇಶ್, ಜಿಲ್ಲೆಯ ಹಲವು ಕ್ರೀಡಾಪಟುಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರು.


ಇವರು ಸುಮಾರು ಎರಡೂವರೆ ದಶಕಗಳಲ್ಲಿ ವಾಲಿಬಾಲ್ ಮತ್ತು ಖೋ ಖೋ ತಂಡವನ್ನು ಜಿಲ್ಲಾ ಮಟ್ಟದಲ್ಲೇ ಅಗ್ರಗಣ್ಯ ತಂಡವನ್ನಾಗಿ ರೂಪಿಸಿದ್ದರು.








ಸುರೇಶ್ ಅವರ ಕುರಿತು ಸಹ ಶಿಕ್ಷಕರಿಗೂ ಅಚ್ಚುಮೆಚ್ಚು...

ಸರ್ಕಾರಿ ಪ್ರೌಢ ಶಾಲೆಯೊಂದನ್ನು ಯಾವುದೇ ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಕಡಿಮೆ ಇಲ್ಲದಂತೆ ಉತ್ತಮವಾಗಿ ಕಟ್ಟಿ ಬೆಳೆಸಿ ಮಾದರಿಯಾದ ಸರ್ಕಾರಿ ಪ್ರೌಢ ಶಾಲೆ ಚೇಳ್ಯಾರು ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕರಾದ ಸುರೇಶ್ ಎಸ್.ಎಂ. ಇನ್ನು ಕೇವಲ ನೆನಪು ಮಾತ್ರ.



ಅಲ್ಪ ಕಾಲದ ಅಸೌಖ್ಯದ ಕಾರಣ ಅವರು ಮಂಗಳೂರಿನ ಒಮೇಗಾ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.



ಗ್ರಾಮೀಣ ಮಕ್ಕಳಿಗೂ ಆಂಗ್ಲ ಮಾಧ್ಯಮ ಕಲಿಕೆಯ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಕನ್ನಡ ಪ್ರೌಢ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಪ್ರತ್ಯೇಕ ವಿಭಾಗವನ್ನು ತೆರೆದು ಅಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಕಾರಣರಾದರು.



ಹಲವು ವರ್ಷಗಳ ಕಾಲ ಉನ್ನತ ಶ್ರೇಣಿಯ ಫಲಿತಾಂಶ ದಾಖಲೆಯೊಂದಿಗೆ ಶಾಲೆಯ ಹೆಸರನ್ನು ಜಿಲ್ಲೆಯಾದ್ಯಂತ ಪರಿಚಯಿಸುವಲ್ಲಿ ಸುರೇಶ್ ಪ್ರಮಖ ಕಾರಣಕರ್ತರು.


ನಿರಂತರವಾದ ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದರು. ವಾಲಿಬಾಲ್ ಮತ್ತು ಖೋ ಖೋ ಕ್ರೀಡೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ವಿದ್ಯಾರ್ಥಿಗಳ ಮೂಲಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.



ಸುರೇಶ್ ಅವರ ಮಾರ್ಗದರ್ಶನದಲ್ಲಿ ಚೇಳ್ಯಾರು ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಪದಕದ ಗೌರವಕ್ಕೂ ಪಾತ್ರರಾಗಿರುವುದು ಇವರ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ.



ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶಾಲೆಯ ಹೆಸರನ್ನು ಜಿಲ್ಲೆಯಲ್ಲಿ ಪರಿಚಯಿಸಿದ್ದು ಮಾತ್ರವಲ್ಲ, ಹಲವಾರು ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.



ಓರ್ವ ಸ್ವಯಂ ಕ್ರೀಡಾ ಪಟುವಾಗಿ, ಶಿಕ್ಷಕನಾಗಿ, ಸಂಘಟಕನಾಗಿ ಎಂದೂ ಬತ್ತದ ತಮ್ಮ ನಗುಮೊಗದ ಸ್ನೇಹಮಯ ಭಾವವನ್ನು ಎಲ್ಲರಿಗೂ ಉಣಬಡಿಸಿದ ಸುರೇಶ್ ಆ ಪ್ರದೇಶದಲ್ಲಿ ವಿಶೇಷವಾಗಿ ಜನಾನುರಾಗಿಯಾಗಿದ್ದರು.



ಶಾಲಾ ಮುಖ್ಯೋಪಾಧ್ಯಾಯರಾಗಿ ಅದರ ಹೊಣೆಗಾರಿಕೆ ಮತ್ತು ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಎಲ್ಲ ಶಿಕ್ಷಕರನ್ನು ಮುನ್ನಡೆಸಿ ಮಾರ್ಗದರ್ಶಕರಾಗಿದ್ದರು.



ತನ್ನ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳ ಮೂಲಕ ಕರ್ನಾಟಕ ಸರ್ಕಾರದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಗಳಿಸಿದ ಸುರೇಶ್ ಅವರು ಅಪರೂಪದ ಮತ್ತು ಪ್ರತಿಭಾವಂತ ಶಿಕ್ಷಕರು.



ಸಹಾಯ ಕೋರಿ ಬಂದ ವಿದ್ಯಾರ್ಥಿಗಳ ಪೋಷಕರಿಗೆ ಆಸರೆಯಾದವರು. ಮಕ್ಕಳ ಉನ್ನತ ಶಿಕ್ಷಣಕ್ಕೂ ನೆರವಾದವರು. ಅವರ ವೈಯಕ್ತಿಕ ಸಮಸ್ಯೆಗಳ ಅಧ್ಯಯನ ನಡೆಸಿ ಕೌನ್ಸಿಲಿಂಗ್ ಮೂಲಕ ಅದನ್ನು ಪರಿಹರಿಸಿದವರು. ಚೇಳ್ಯಾರು ಗ್ರಾಮದಲ್ಲಿ ಓರ್ವ ಶಿಸ್ತಿನ ಶಿಕ್ಷಕರೆಂದು ಹೆಸರುವಾಸಿಯಾಗಿದ್ದರು.



ತನ್ನ ಶಿಸ್ತುಬದ್ಧ, ಸಾಂಸ್ಕಾರಪೂರ್ಣ ಆರೋಗ್ಯಕರ ಜೀವನ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಒಂದೇ ಶಾಲೆಯಲ್ಲಿ 36 ವರ್ಷಗಳ ಸೇವೆಯನ್ನು ನಿರ್ವಹಿಸಿದ ಅಪರೂಪದ ಶಿಕ್ಷಕರು ಇವರು.



ಚೇಳ್ಯಾರು ಮತ್ತು ಸುತ್ತಮುತ್ತಲಿನ ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

Ads on article

Advertise in articles 1

advertising articles 2

Advertise under the article