Lock-up Death, 8 police men suspended; ಮಾನಸಿಕ ಅಸ್ವಸ್ಥ ಲಾಕಪ್ ಡೆತ್: 8 ಪೊಲೀಸರ ಸಸ್ಪೆಂಡ್- ಸ್ಥಳದಲ್ಲೇ ಐಜಿಪಿ ಆದೇಶ
ವಿರಾಜಪೇಟೆಯಲ್ಲಿ ನಡೆದಿದ್ದ ರಾಯ್ ಡಿಸೋಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್ ಎಂಟು ಪೊಲೀಸರನ್ನು ಸಸ್ಪೆಂಡ್ ಮಾಡಿದ್ದಾರೆ.
ವಿರಾಜಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಅವರು, ಮೇಲ್ನೋಟಕ್ಕೆ ಪೊಲೀಸರ ವಿರುದ್ಧದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹೆಡ್ ಕಾನ್ಸ್ಟೆಬಲ್ ಸೇರಿದಂತೆ ಎಂಟು ಮಂದಿಯನ್ನು ಅಮಾನತು ಮಾಡಿದರು.
ಅಲ್ಲದೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಐಡಿಗೆ ವಹಿಸಲಾಗುವುದು ಎಂದು ಪ್ರವೀಣ್ ಪವಾರ್ ತಿಳಿಸಿದರು.
ಮಾಧ್ಯಮ ಜೊತೆ ಮಾತನಾಡಿದ ಅವರು, ಪೊಲೀಸರ ಹಲ್ಲೆಯಿಂದ ರಾಯ್ ಡಿಸೋಜ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅರೋಪಿಸಿದ್ಧಾರೆ. ಅವರ ಸಹೋದರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅವರನ್ನು ದೂರಿನ ಅನ್ವಯ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಡಿವೈಎಸ್‌ಪಿ ಜಯಕುಮಾರ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರ ವಿರುದ್ಧದ ಆರೋಪ ಸಾಬೀತಾಗಿದೆ. ಇದರಿಂದ ಸ್ಥಳದಲ್ಲೇ ಎಂಟು ಮಂದಿಯನ್ನು ಸೇವೆಯಿಂದ ಅಮಾನತು ಮಾಡುತ್ತಿದ್ದೇನೆ ಎಂದು ಐಜಿಪಿ ಪ್ರವೀಣ್ ಪವಾರ್ ಆದೇಶ ಮಾಡಿದರು.
ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್‌ಪಿ ಜಯಕುಮಾರ್, ಪಟ್ಟಣ ಪಂಚಾಯತ್ ಸದಸ್ಯ ಆಗಸ್ಟಿನ್ ಬೆನ್ನಿ, ಪೃಥ್ವಿರಾಜ್, ಯುವ ಕಾಂಗ್ರೆಸ್ ನಾಯಕ ಉಮರ್ ಫಾರೂಕ್, ಜಾನ್ಸನ್, ಮರ್ವಿನ್ ಲೋಬೋ, ಶಬೀರ್ ಮತ್ತಿರರು ಉಪಸ್ಥಿತರಿದ್ದರು.
ಜೂನ್ 9ರ ತಡರಾತ್ರಿ ರಾಯ್ ಡಿಸೋಜ ಮನೆಯಿಂದ ಹೊರಗೆ ಹೋಗಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದರಂತೆ. ಈ ವೇಳೆ, ರಾಯ್ ಡಿಸೋಜ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ಮೃಗೀಯವಾಗಿ ಹಿಂಸೆ ನೀಡಿದ್ದು, ಮನ ಬಂದಂತೆ ಥಳಿಸಿದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿದ್ಧಾರೆ ಎಂದು ರಾಯ್ ಡಿಸೋಜ ಅವರ ತಾಯಿ ಮೆಟಿಲ್ಡಾ ಡಿಸೋಜ ಗದ್ಗದಿತರಾಗಿ ವಿವರಿಸಿದ್ದಾರೆ.