Unlock in DK- ದಕ್ಷಿಣ ಕನ್ನಡ ಜನತೆಗೆ ಸಿಹಿ ಸುದ್ದಿ: ಬಸ್ ಸೇವೆ ಆರಂಭದ ಜೊತೆಗೆ ಸಂಜೆ 5ರ ವರೆಗೆ ಲಾಕ್‌ಡೌನ್ ಸಡಿಲಿಕೆ?
ದ.ಕ.ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಲಾಕ್ ಡೌನ್ ಸಡಿಲಿಕೆ ಸಾಧ್ಯತೆ!
ಕೊರೊನಾ ಸೋಂಕು ನಿಯಂತ್ರಣ ಸಾಧಿಸಲು ದಕ್ಷಿಣ ಕನ್ನಡದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಹಂತಹಂತವಾಗಿ ಅನ್ ಲಾಕ್ ಆಗುತ್ತಿದೆ. ಕಳೆದ ವಾರವಷ್ಟೇ ಮಧ್ಯಾಹ್ನ 2 ಗಂಟೆ ವರೆಗೆ ಸಡಿಲಿಕೆ ಮಾಡಿದ್ದ ಜಿಲ್ಲಾಡಳಿತ ಮತ್ತೊಂದು ಸಿಹಿ ಸುದ್ದಿ ನೀಡಲಿದೆ.
ಜುಲೈ 1ರಂದು ಖಾಸಗಿ ಬಸ್ ಸೇವೆ ಆರಂಭವಾಗಲಿದ್ದು, ಸ್ತಬ್ದವಾಗಿದ್ದ ಜನಜೀವನ ಮತ್ತೆ ಸಹಜ ಸ್ಥಿತಿಗೆ ಬರಲಿದೆ. ಇದರ ಜೊತೆಗೆ ಲಾಕ್ ಡೌನ್ ಸಡಿಲಿಕೆಯ ಇನ್ನೊಂದು ಆದೇಶ ಬರುವ ಸಾಧ್ಯತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಯ ಬಳಿಕ ಅವರು ಈ ವಿಷಯ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಯಾಗುತ್ತಿದೆ. ಜಿಲ್ಲೆಯಲ್ಲೀಗ ಕೊರೊನಾ ಪಾಸಿಟಿವಿಟಿ ದರ ಸತತವಾಗಿ ಐದಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ. ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಿ ಲಾಕ್ ಡೌನ್ ಸಡಲಿಕೆ ಮಾಡಲಾಗುವುದು. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಅವರು ತಿಳಿಸಿದರು.