VHP extends help to Church - ಕೋವಿಡ್ ಅಬ್ಬರದಿಂದ ನಲುಗಿದ ಬೆಳ್ತಂಗಡಿಯ ಕ್ರೈಸ್ತ ಆಶ್ರಮ: ನೆರವಿಗೆ ಧಾವಿಸಿದ ವಿಎಚ್‍ಪಿ
ಒಂದೇ ದಿನ 210 ಮಂದಿಗೆ ಕೊರೊನಾ ಸೋಂಕು ಹರಡುವ ಮೂಲಕ ದಕ್ಷಿಣ ಕನ್ನಡವನ್ನೇ ಬೆಚ್ಚಿ ಬೀಳಿಸಿದ್ದ ನೆರಿಯಾ ಸಿಯೋನ್ ಆಶ್ರಮದ ನೆರವಿಗೆ ವಿಶ್ವ ಹಿಂದೂ ಪರಿಷತ್ ಧಾವಿಸಿದೆ.
ಅದರ ಬೆಳ್ತಂಗಡಿ ಘಟಕದ ಕಾರ್ಯಕರ್ತರು ಆಶ್ರಮಕ್ಕೆ ಧಾವಿಸಿದ್ದು, ಅಗತ್ಯವಿರುವ ಎಲ್ಲ ಸೇವೆಯನ್ನು ನೀಡಿದ್ದಾರೆ. ಅಲ್ಲದೆ, ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ನೆರವು ಮುಂದುವರಿಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಸ್ಪಷ್ಟಪಡಿಸಿದೆ.'
ಸುಮಾರು 270 ಜನ ನಿರಾಶ್ರಿತರು ಹಾಗೂ ವಯೋವೃದ್ಧರು ಇರುವ ಈ ಆಶ್ರಮದಲ್ಲಿ ಒಂದೇ ದಿನ ಬರೋಬ್ಬರಿ 210 ಮಂದಿಗೆ ಕೊರೋನಾ ಪಾಸಿಟಿವ್ ಆಗಿತ್ತು.
ಈ ಹಿನ್ನೆಲೆಯಲ್ಲಿ ವಿಎಚ್‍ಪಿ ಕಾರ್ಯಕರ್ತರು ಆಶ್ರಮವನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿದ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದಲೇ ಆಶ್ರಮ, ಗೋಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿದ್ದಾರೆ. ಅಲ್ಲದೆ, ಅಲ್ಲಿನ ಗೋವುಗಳ ಆಹಾರ ಆರೈಕೆಗೂ ವ್ಯವಸ್ಥೆ ಮಾಡಿದ್ದಾರೆ.
ಸಿಯೋನ್ ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ಸೇವೆ ಮುಂದುವರಿಯಲಿದೆ ಎಂದು ವಿಎಚ್‍ಪಿ ನೆರಿಯ ಘಟಕದ ಉಪಾಧ್ಯಕ್ಷರಾದ ದೀಕ್ಷಿತ್ ನೆರಿಯ ಸ್ಪಷ್ಟಪಡಿಸಿದ್ದಾರೆ.