BJP Happy with this news- ಬಿಜೆಪಿಗೆ ಖುಷಿ ನೀಡಿದ ಸುದ್ದಿ ಇದು... ಉ.ಪ್ರ. ಸಿಎಂ ಯೋಗಿ ಭವಿಷ್ಯದ ಪ್ರಶ್ನೆ ಇದು...!
ತಮಿಳುನಾಡು, ಪಶ್ಚಿಮ ಬಂಗಾಳ ಸೋಲು, ಕೊರೋನಾ ಸೋಂಕಿನ ವ್ಯಾಪಕತೆ, ತೈಲ ಬೆಲೆ ಏರಿಕೆ, ಲಾಕ್‌ಡೌನ್, ಲಸಿಕೆ ಅಭಾವ... ಹೀಗೆ ಸಾಲು ಸಾಲು ಹಿನ್ನಡೆಗಳಿಂದ ಕಂಗಾಲಾಗಿದ್ದ ನರೇಂದ್ರ ಮೋದಿ ಹಾಗೂ ಬಿಜೆಪಿ ಪಾಳಯಕ್ಕೆ ಖುಷಿ ತಂದ ವಿಷಯವಿದೆ.
ದೇಶದ ಪ್ರತಿಷ್ಠಿತ ಐಎಎನ್‌ಎಸ್- ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಗಳ ವರದಿ ಇದೀಗ ಬಯಲಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸ್ಥಾನವನ್ನು ಸುಭದ್ರಪಡಿಸಿದ್ದಾರೆ ಎಂದು ಈ ವರದಿಗಳು ಸ್ಪಷ್ಟಪಡಿಸಿವೆ.
ಚುನಾವಣೆಯ ಹೊಸ್ತಿಲಲ್ಲಿ ಇರುವ ದೇಶದ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮತದಾರರ ಸಮೀಕ್ಷೆ ಪ್ರಕಾರ ಶೇಕಡಾ 52 ಮಂದಿ ಯೋಗಿ ಪರ ವಾಲಿದ್ದಾರೆ ಎನ್ನಲಾಗಿದೆ. ಆದರೆ, ಶೇಕಡಾ 37 ಮಂದಿ ಆದಿತ್ಯನಾಥ್ ಮತ್ತೆ ಸಿಎಂ ಆಗುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.
2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಏರಿತ್ತು. ಅಚ್ಚರಿ ಎಂಬಂತೆ ಆಗ ಕೇಂದ್ರ ಸಚಿವರಾಗಿದ್ದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಗದ್ದುಗೆ ಸ್ವೀಕರಿಸಿದ್ದರು.
ಆ ಚುನಾವಣೆಯಲ್ಲಿ ಬಿಜೆಪಿ ಸಿಂಹಪಾಲು ಸ್ಥಾನ ಗೆದ್ದಿದ್ದರೆ, ಸಮಾಜವಾದಿ ಪಕ್ಷ 47 ಮತ್ತು ಬಿಎಸ್‌ಪಿ 19 ಸ್ಥಾನಗಳನ್ನು ಗೆದ್ದು ನಿರಾಸೆ ಮೂಡಿಸಿತ್ತು. ಇನ್ನು ಕಾಂಗ್ರೆಸ್ ಕೇವಲ 7 ಸ್ಥಾನ ಪಡೆದು ಒಂದಂಕಿಗೆ ತೃಪ್ತಿ ಹೊಂದಿತ್ತು.
ಗಂಗಾ ನದಿಯಲ್ಲಿ ಕೋವಿಡ್ ಗೆ ಬಲಿಯಾದ ಸಂತ್ರಸ್ತರ ಹೆಣದ ರಾಶಿ ರಾಶಿ ಪ್ರವಾಹ ಹರಿದು ಬಂದಿದ್ದರೂ ಕೆಲ ದಿನಗಳ ಹಿಂದೆ ನಡೆದಿದ್ದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಾರಮ್ಯ ಮೆರೆದಿತ್ತು ಎಂಬುದನ್ನು ಇಲ್ಲಿ ನೆನಪಿಸಬಹುದು..