Bus fare hike stayed- ಬೇಕಾಬಿಟ್ಟಿ ಬಸ್ ದರ ಏರಿಕೆ: ಮಾಲಕರಿಗೆ ಲಗಾಮು ಹಾಕಿದ ದ.ಕ. ಡಿಸಿ
ಮಂಗಳೂರು: ಎಲ್ಲ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ಕೋವಿಡ್ ಸಂಕಷ್ಟದ ಸಮಯದಲ್ಲೂ ಬೇಕಾಬಿಟ್ಟಿ ಬಸ್ ದರವನ್ನು ಏರಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಬಸ್ ದರ ಏರಿಸಿರುವ ನಿರ್ಧಾರವನ್ನು ವಿವಿಧ ಸಂಘಟನೆಗಳು ವಿರೋಧಿಸಿದ್ದು, ಹಲವೆಡೆ ಈ ಬಗ್ಗೆ ಪ್ರತಿಭಟನೆಗಳೂ ನಡೆದಿವೆ.
ಈ ಪ್ರತಿಭಟನೆ ಮತ್ತು ಸಾರ್ವಜನಿಕ ಆಕ್ರೋಶದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಆದೇಶ ಜಾರಿಗೊಳಿಸಿದ ದ.ಕ. ಜಿಲ್ಲಾಧಿಕಾರಿ ಮಾಲಕರ ಬಸ್ ಏರಿಕೆಯ ನಿರ್ಧಾರಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದಾರೆ.
ಬಸ್ ಮಾಲಕರ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಈ ಆದೇಶ ಹೊರಡಿಸಿದ್ದು, 2021ರ ಲಾಕ್‌ಡೌನ್ ಮುಂಚೆ ಇದ್ದ ಪ್ರಯಾಣ ದರವನ್ನು ಪ್ರಯಾಣಿಕರಿಂದ ಪಡೆದುಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.
ಬಸ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ, ಈ ವಾರ ಮಹತ್ವದ ಆರ್‌ಟಿಎ ಸಭೆ ಕರೆಯುವುದಾಗಿ ಅವರು ಬಸ್ ಮಾಲಕ ಸಂಘಕ್ಕೆ ಭರವಸೆ ನೀಡಿದ್ದಾರೆ. ಈ ಸಭೆಯಲ್ಲಿ ಬಸ್ ದರವನ್ನು ಏರಿಸುವ ಇಲ್ಲ ಯಥಾ ಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾವುದು ಎಂದು ಡಿಸಿ ರಾಜೇಂದ್ರ ತಿಳಿಸಿದ್ದಾರೆ.
ಅಲ್ಲಿಯ ತನಕ ಹಳೆಯ ಬಸ್ ದರವನ್ನೇ ಮುಂದುವರಿಸುವಂತೆ ಡಿಸಿ ಬಸ್ ಮಾಲಕರಿಗೆ ಸೂಚನೆ ನೀಡಿದ್ದು, ಈ ಆದೇಶವನ್ನು ಪಾಲನೆ ಮಾಡುವುದಾಗಿ ಜಿಲ್ಲಾ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.