Surgery to Modi cabinet- ಮೋದಿ ಸಂಪುಟಕ್ಕೆ ಸರ್ಜರಿ: ಡಿವಿಎಸ್ ಸಹಿತ ಹಲವರ ರಾಜೀನಾಮೆ- ಶೋಭಾ, ರಾಜೀವ್ ಸಹಿತ ಹೊಸಮುಖಗಳಿಗೆ ಮಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 43 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಸುವರ್ಣ ನ್ಯೂಸ್-ಕನ್ನಡಪ್ರಭ ಒಡೆಯ ರಾಜೀವ್ ಚಂದ್ರಶೇಖರ್ ಹಾಗೂ ಎ. ನಾರಾಯಣಸ್ವಾಮಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ.
ಇದೇ ವೇಳೆ, ಡಿವಿ ಸದಾನಂದ ಗೌಡ ಸಹಿತ 12 ಸಚಿವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರೊಂದಿಗೆ ರವಿ ಶಂಕರ್ ಪ್ರಸಾ್, ತಾವರ್ ಚಂದ್ ಗೆಹ್ಲೋಟ್, ರಮೇಶ್ ಪೋಕ್ರಿಯಾಲ್, ಡಾ. ಹರ್ಷವರ್ಧನ್, ಪ್ರಕಾಶ್ ಜಾವ್ಡೇಕರ್, ಸಂತೋಷ್ ಕುಮಾರ್ ಗಂಗ್ವಾರ್, ಬಾಬುಲ್ ಸುಪ್ರಿಯೋ, ರತನ್ ಲಾಲ್ ಕಟಾರಿಯಾ, ಪ್ರತಾಪ್ ಚಂದ್ರ ಸಾರಂಗಿ, ಸುಶ್ರೀ ದೇಬಾಶ್ರೀ ಚೌಧರಿ ಹಾಗೂ ದೋತ್ರೆ ಸಂಜಯ್ ಶಾಮರಾವ್ ಅವರನ್ನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದ್ದು, ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಲು ರಾಷ್ಟ್ರಪತಿಯವರಿಗೆ ಮನವಿ ಮಾಡಲಾಗಿದೆ.
ಹಾಲಿ ಸಚಿವರ ಮೌಲ್ಯಮಾಪನ ಮಾಡಲಾಗಿದೆ ಎನ್ನಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೊಸ ಸಚಿವರ ಪಟ್ಟಿ ತಯಾರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದೇ ವೇಳೆ, ಬೆಳಗ್ಗೆ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಈ ಸಭೆ ರದ್ದಾಗಿದೆ. ಇದಕ್ಕೆ ಏನು ಕಾರಣ ಎಂಬುದು ಇನ್ನೂ ನಿಗೂಢವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಗಂಗ್ವಾರ್, ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ದಿಬೇಶ್ರೀ ಚೌಧರಿ ಸೇರಿದಂತೆ ಹಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಚಿವ ಡಾ. ಹರ್ಷವರ್ಧನ್, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿವಿ ಸದಾನಂದ ಗೌಡ ಅವರೂ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಥಾವರ್ ಚಂದ್ ಗೆಹ್ಲೋಟ್ ರನ್ನು ನಿನ್ನೆ ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇಂದು ಅವರು ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಕಾರ್ಮಿಕ ಇಲಾಖೆಯ ಸ್ವತಂತ್ರ ಪ್ರಭಾರದ ಜವಾವ್ದಾರಿ ನಿರ್ವಹಿಸುತ್ತಿದ್ದ ಸಂತೋಷ್ ಗಂಗ್ವಾರ್ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಾವು ರಾಜೀನಾಮೆ ನೀಡಿರುವುದನ್ನು ಖಚಿತ ಪಡಿಸಿರುವ ಸಂತೋಷ್ ಅವರು ಮುಂದಿನ ದಿನಗಳಲ್ಲಿ ತಮಗೆ ಹೊಸದಾಗಿ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.