HC on delay in trials- ವಿಳಂಬ ವಿಚಾರಣೆ: ಶೀಘ್ರ ನ್ಯಾಯದಾನದ ಆರೋಪಿಯ ಹಕ್ಕು ಮೊಟಕುಗೊಂಡಂತೆ- ಹೈಕೋರ್ಟ್
ನ್ಯಾಯವಿಚಾರಣೆಗೆ ಸರ್ಕಾರಿ ಅಭಿಯೋಜಕರು(ಪಬ್ಲಿಕ್ ಪ್ರಾಸಿಕ್ಯೂಟರ್) ಹಾಜರಾಗದಿದ್ದರೆ ಅದರಿಂದ ಆರೋಪಿಗೆ ವಿಳಂಬ ನ್ಯಾಯದಾನಕ್ಕೆ ಕಾರಣವಾಗುತ್ತದೆ ಮತ್ತು ತನ್ನ ವಿರುದ್ಧದ ಪ್ರಕರಣ ಶೀಘ್ರ ವಿಚಾರಣೆ ನಡೆಸಬೇಕಾದ ಆರೋಪಿಯ ಹಕ್ಕು ಉಲ್ಲಂಘನೆ ಆಗುತ್ತದೆ ಎಂದು ಕರ್ನಾಟಕ ರಾಜ್ಯ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸರ್ಕಾರಿ ಅಭಿಯೋಜಕರ ಕೊರತೆ ವಿಚಾರವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಸಂದರ್ಭದಲ್ಲಿ ಈ ಮಹತ್ವ ಆದೇಶ ಹೊರಡಿಸಿದೆ.
ಕೂಡಲೇ ಖಾಲಿ ಇರುವ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಿದ ವಿಭಾಗೀಯ ಪೀಠ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.
2019ರ ಸೆಪ್ಟೆಂಬರ್ 27ರಿಂದ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರ ಕೊರತೆ ಗಂಭೀರವಾಗಿ ಎದುರಿಸುತ್ತಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತ ಕ್ರಮ ಕೈಗೊಳ್ಳಿ ಎಂದು ಗೃಹ ಇಲಾಖೆಗೆ, ಸರ್ಕಾರಕ್ಕೆ ಕಾಲ ಕಾಲಕ್ಕೆ ನಿರ್ದೇಶಿಸುತ್ತಲೇ ಬರಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
12 ತಿಂಗಳೊಳಗೆ ಖಾಲಿ ಇರುವ ಹುದ್ದೆಗಳನ್ನು ತುಂಬಲಾಗುವುದು ಎಂದು ಗೃಹ ಕಾರ್ಯದರ್ಶಿಯವರೇ ಹೈಕೋರ್ಟ್‌ಗೆ ಭರವಸೆ ನೀಡಿದ್ದರು. ಸರ್ಕಾರ ಹೇಳಿದಂತೆ ಈಗಾಗಲೇ ಒಂದು ವರ್ಷದ ಗಡು ಮೀರಿ ಹೋಗಿದೆ. ಇನ್ನು ತಡ ಮಾಡದೆ ಸರ್ಕಾರಿ ಅಭಿಯೋಜಕರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿತು.
ಮುಂದಿನ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಲಾಗಿದೆ.