DV resgin- ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ
ಮಂಗಳೂರು: ಡಿ.ವಿ. ಸದಾನಂದ ಗೌಡ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ಧಾರೆ. ಕರಾವಳಿ ಮೂಲದ ರಾಜಕಾರಣಿಯ ಈ ರಾಜೀನಾಮೆಗೂ ಕಟೀಲು ಕ್ಷೇತ್ರಕ್ಕೂ ಸಂಬಂಧ ಇದೆಯೇ..?
ಹೌದು, ಇದೆ ಎನ್ನುತ್ತದೆ ಈ ಕಾಕತಾಳೀಯ ಘಟನೆ.
2012ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಿ.ವಿ ಸದಾನಂದ ಗೌಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ತವರಿಗೆ ಆಗಮಿಸಿದ್ದರು.
ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಜುಲೈ 7 ರಂದು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಭೇಟಿಗೆ ಈಗ 9 ವರ್ಷಗಳ ಸಂಭ್ರಮ. ಆದರೆ, ಕಾಕತಾಳೀಯವೆಂಬಂತೆ 9 ವರ್ಷಗಳ ಬಳೀಕ ಇದೇ ದಿನ ಕೇಂದ್ರ ಸಚಿವ ಸಂಪುಟಕ್ಕೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ ರಾಜೀನಾಮೆ ನೀಡಿದ್ದಾರೆ.
ಇನ್ನೂ ವಿಚಿತ್ರ ಎಂದರೆ, ಆ ಭೇಟಿ ವೇಳೆ, ಶೋಭಾ ಕರಂದ್ಲಾಜೆ ಡಿವಿ ಸದಾನಂದ ಗೌಡರ ಪಕ್ಕದಲ್ಲೇ ಇದ್ದರು. ಈ ಬಾರಿ ಅವರ ರಾಜೀನಾಮೆಗೆ ಶೋಭಾ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.
ಕರ್ನಾಟಕದ ನಾಲ್ವರು ಸಂಸದರು ಮೋದಿ ಅವರ ನೂತನ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವಿಎಸ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸರಿಯಾಗಿ 9 ವರ್ಷಗಳ ಹಿಂದೆ ಇದೇ ದಿನ ಮುಖ್ಯಮಂತ್ರಿಯಾಗಿದ್ದ ವೇಳೆ ಕಟೀಲಿಗೆ ಬಂದು ದೇವಿ ದರ್ಶನ ಪಡೆದಿದ್ದರು. ಇದೇ ದಿನ ಇಂದು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಮೋದಿ ಸಂಪುಟದಲ್ಲಿ ಸದಾನಂದ ಗೌಡರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.