![Historical Judgement- ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ದೇಶದ ಗಮನ ಸೆಳೆದ ಐತಿಹಾಸಿಕ ತೀರ್ಪು ನೀಡಿದ ಲೋಕಾಯುಕ್ತ ನ್ಯಾಯಾಲಯ Historical Judgement- ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ದೇಶದ ಗಮನ ಸೆಳೆದ ಐತಿಹಾಸಿಕ ತೀರ್ಪು ನೀಡಿದ ಲೋಕಾಯುಕ್ತ ನ್ಯಾಯಾಲಯ](https://blogger.googleusercontent.com/img/b/R29vZ2xl/AVvXsEiGtXM2mRRV5ol9JnKETH_fU6tW61gnTdhyCS1H59lH-r8tEY1K_8rStnNkHPnp4QgLtbWc1S7p-1L1R7BZRWPVMFd7xfCGxVGlxlLqVKRopWK_U68pHXKtb1YqvTfo2t7J56SqyB4ACYw/w640-h348/MCC+Mangaluru+City+Corporation+Palike.jpg)
Historical Judgement- ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ದೇಶದ ಗಮನ ಸೆಳೆದ ಐತಿಹಾಸಿಕ ತೀರ್ಪು ನೀಡಿದ ಲೋಕಾಯುಕ್ತ ನ್ಯಾಯಾಲಯ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರೀ ಭ್ರಷ್ಟಾಚಾರ ಇದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ದಶಕದಿಂದಲೇ ಇಲ್ಲೇ ಗೂಟ ಹಾಕಿಕೊಂಡು ಕೋಟಿಗಟ್ಟಲೆ ಬಾಚುತ್ತಿರುವವರು ಈಗಲೂ ಇಲ್ಲಿ ಇದ್ದಾರೆ.
ತಮ್ಮ ಪಾಲಿನ ಪ್ರಸಾದವನ್ನು ತೆಗೆದುಕೊಂಡು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಕಣ್ಣಿದ್ದೂ ಕುರುಡರಂತೆ ಸುಮ್ಮನಿದ್ದಾರೆ.
ಆದರೆ, ಭ್ರಷ್ಟಾಚಾರಿಗಳು ಜೀವನ ಪರ್ಯಂತ ಮುಟ್ಟಿ ನೋಡಿಕೊಳ್ಳುವಂತಹ ಐತಿಹಾಸಿಕ ತೀರ್ಪನ್ನು ಮಂಗಳೂರಿನ ಲೋಕಾಯುಕ್ತ ನ್ಯಾಯಾಲಯ ಸೋಮವಾರ ಪ್ರಕಟಿಸಿದ್ದು, ಇಡೀ ದೇಶವೇ ನ್ಯಾಯಾಂಗದತ್ತ ವಿಶ್ವಾಸದಿಂದ ತಿರುಗಿ ನೋಡುವಂತೆ ಮಾಡಿದೆ.
ಬರೋಬ್ಬರಿ 14 ವರ್ಷಗಳ ಹಿಂದೆ, ಅಂದರೆ 2007ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ಅಧಿಕಾರಿ( ಟೌನ್ ಪ್ಲಾನಿಂಗ್) ಆಗಿದ್ದ ಬಿ.ಪಿ. ಶಿವರಾಜು ಅವರನ್ನು ಆಗಿನ ಲೋಕಾಯುಕ್ತ ಪೊಲೀಸರು ಟ್ರಾಪ್ ಮಾಡಿ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಹಾಗೂ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿ ಬಿ.ಪಿ. ಶಿವರಾಜು ಗೆ ಐದು ವರ್ಷ ಸೆರೆವಾಸ ಹಾಗೂ 34 ಲಕ್ಷ ರೂ.ದಂಡ ವಿಧಿಸಿದೆ.
ಈ ಐತಿಹಾಸಿಕ ತೀರ್ಪು ನೀಡಿದವರು ಲೋಕಾಯುಕ್ತ ವಿಶೇಷ ನ್ಯಾಯಾಲಯ ಹಾಗೂ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ. ಸುಮಾರು 106 ಪುಟಗಳ ಸುದೀರ್ಘ ತೀರ್ಪು ನೀಡಿರುವ ಜಕಾತಿಯವರು, ಇಡೀ ದೇಶವೇ ಈ ತೀರ್ಪಿನ ಬಗ್ಗೆ ಚರ್ಚಿಸುವಂತೆ ಮಾಡಿದ್ದಾರೆ.
ಅಸೌಖ್ಯದ ಕಾರಣದಿಂದ ತಮಗೆ ಶಿಕ್ಷೆಯ ಪ್ರಮಾಣವನ್ನು ಕಡಿತ ಮಾಡಬೇಕು ಎಂಬ ಮನವಿಯನ್ನೂ ತಿರಸ್ಕರಿಸಿರುವ ನ್ಯಾಯಾಧೀಶರು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಇರುವ ಹಾಗೂ ಆರೋಪಿಯ ವಿರುದ್ಧ ಇರುವ ಆರೋಪ ಸಾಬೀತಾಗಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ಅಭಿಯೋಜನೆಯ ಪರವಾಗಿ 27 ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು, 160 ದಾಖಲೆಗಳನ್ನು ಆರೋಪಿಯ ವಿರುದ್ಧ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ವಿಶೇಷ ಅಭಿಯೋಜಕರಾದ ಕೆ.ಎಸ್.ಎನ್. ರಾಜೇಶ್ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಭ್ರಷ್ಟಾಚಾರ ಸಮಾಜಕ್ಕೆ ಅಂಟಿದ ಕ್ಯಾನ್ಸರ್ ಎಂದು ತೀರ್ಪಿನಲ್ಲಿ ಹೇಳಿರುವ ಜಕಾತಿ, ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವನ್ನು ಪ್ರತಿಪಾದಿಸಿದ್ದಾರೆ.
ಆರೋಪಿ ಕಳೆದ 14 ವರ್ಷಗಳಿಂದ 17 ಲಕ್ಷ ರೂ. ಆಸ್ತಿಯನ್ನು ಅನುಭವಿಸಿರುವುದರಿಂದ ಅದರ ದುಪ್ಪಟ್ಟು ಅಂದರೆ 34 ಲಕ್ಷ ರೂ.ಗಳ ದಂಡವನ್ನು ವಿಧಿಸಿದ್ಧಾರೆ.
ಅಪರಾಧಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ತೀರ್ಪು ದೇಶದಲ್ಲೇ ಭ್ರಷ್ಟಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಾಗಿದೆ.