Kota house controversy- ಆರು ಕೋಟಿಯ ಮನೆ: ಲೋಕಾಯುಕ್ತರಿಗೆ ಪತ್ರ ಬರೆದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕೊರೋನಾ ಟೈಮಿನಲ್ಲಿ ಇವರಾದರೂ ಲಾಭದಲ್ಲಿ ಇದ್ದಾರಲ್ಲ, ಸಂತೋಷ... ಎಂಬ ವಿಜಯಲಕ್ಷ್ಮಿ ಕೋಟ್ಯಾನ್ ಎಂಬ ಹೆಸರಿನ ಫೇಸ್ಬುಕ್ ಖಾತೆಯೊಂದರ ಪೋಸ್ಟ್ ವೈರಲ್ ಆಗಿದೆ.
"ಸರಳ, ಸಜ್ಜನ, ಶುದ್ಧಹಸ್ತ, ಪ್ರಾಮಾಣಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ನಿರ್ಮಾಣ ಹಂತದಲ್ಲಿರುವ ಗುಡಿಸಲು. ಮೌಲ್ಯ ಕೇವಲ ಆರು(6) ಕೋಟಿ ರೂಪಾಯಿಗಳು" ಎಂಬುದು ಈ ಪೋಸ್ಟ್ನ ಅಡಿಬರಹ.
ಆದರೆ, ಈ ಪೋಸ್ಟ್ಗೆ ಮಾಜಿ ಸಚಿವ ಕೋಟ ಅವರ ಪ್ರತಿಕ್ರಿಯೆ ಸಖತ್ತಾಗಿದೆ. ಈ ಪೋಸ್ಟ್ನ್ನು ಉಲ್ಲೇಖಿಸಿ ಲೋಕಾಯುಕ್ತ ಕಚೇರಿಗೆ ಪತ್ರ ಬರೆದಿರುವ ಕೋಟಾ ಈ ಬಗ್ಗೆ ಸಮಗ್ರ ತನಿಖೆಗೆ ನಡೆಸುವಂತೆ ಒತ್ತಾಯಿಸಿದ್ದಾರೆ.
ನಾನು ವಿಧಾನ ಪರಿಷತ್ ಸದಸ್ಯನಾಗಿ ಮೂರು ಬಾರಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ಸಂಪುಟ ದರ್ಜೆಯ ಸಚಿವನಾಗಿದ್ದೇನೆ. ಒಂದು ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಅಲ್ಲದೆ, ಶಾಸಕನಾಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲೋಕಾಯುಕ್ತರಿಗೆ ಆಸ್ತಿ ಪಾಸ್ತಿ ಹಾಗೂ ಉತ್ತರದಾಯಿತ್ವ ವಿವರ ಇರುವ ಸಮಗ್ರ ಪಟ್ಟಿಯನ್ನು ಕೂಡ ಲೋಕಾಯುಕ್ತರಿಗೆ ಅಧಿಕೃತವಾಗಿ ನೀಡಿದ್ದೇನೆ. ಆದರೆ, ನಾನು 2 ವರ್ಷಗಳಿಂದ ಕಟ್ಟುತ್ತಿರುವ ವಾಸ್ತವ್ಯದ ಮನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಅಪಪ್ರಚಾರರಿಂದ ನನಗೆ ಸಹಜವಾಗಿಯೇ ನೋವಾಗಿದೆ ಎಂದಿರುವ ಅವರು ಬ್ರಹ್ಮಾವರ ತಾಲೂಕು ಗಿಳಿಯಾರಿನಲ್ಲಿ 13 ಸೆಂಟ್ಸ್ ಜಾಗದಲ್ಲಿ ಐದು ಗುಂಟೆ ಜಮೀನಿನಲ್ಲಿ ನನ್ನ ಸ್ವಂತ ಆದಾಯದ ಖರೀದಿಯಾಗಿದೆ. ಈ ಜಾಗದಲ್ಲಿ ವಾಸ್ತವ್ಯದ ಉದ್ದೇಶಕ್ಕೆ ಮನೆ ನಿರ್ಮಿಸುತ್ತಿದ್ದೇನೆ. ಬ್ಯಾಂಕಿನಿಂದ ಸಾಲ ಪಡೆದೇ ಈ ಮನೆಯನ್ನು ಕಟ್ಟಿಸುತ್ತಿದ್ದೇನೆ. ಆದರೆ, ಇದು ಆರು ಕೋಟಿಯದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.