Jail for Professor - ಲಂಚ ಸ್ವೀಕಾರ: ಮಂಗಳೂರು ವಿವಿಯ ಸಮಾಜ ಶಾಸ್ತ್ರದ ಸಹಾಯಕ ಪ್ರೊಫೆಸರ್ ಡಾ. ಅನಿತಾ ರವಿಶಂಕರ್ ಗೆ 5 ವರ್ಷ ಶಿಕ್ಷೆ
ಮಂಗಳೂರು ವಿವಿಯ ಪಿಎಚ್ ಡಿ ವಿದ್ಯಾರ್ಥಿನಿ ಪ್ರೇಮ ಡಿ'ಸೋಜ ಎಂಬವರಿಂದ ಅವರ ಪ್ರಬಂಧ ಅಂಗೀಕರಿಸಲು ಲಂಚ ಸ್ವೀಕರಿಸಿದ ಯೂನಿನರ್ಸಿಟಿಯ ಸಮಾಜ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ರವಿಶಂಕರ್ ಅವರ ವಿರುದ್ಧದ ಆರೋಪ ಸಾಬೀತಾಗಿದ್ದು, ಅವರಿಗೆ ಐದು ವರ್ಷಗಳ ಜೈಲು ವಾಸದ ಶಿಕ್ಷೆ ಪ್ರಕಟಿಸಲಾಗಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯವೂ ಅಗಿರುವ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಬಿ. ಬಿ. ಜಕಾತಿ ಈ ತೀರ್ಪು ಪ್ರಕಟಿಸಿದ್ದಾರೆ.
2012ರ ಡಿಸೆಂಬರ್‌ನಲ್ಲಿ ಆರೋಪಿ ಡಾ. ಅನಿತಾ ವಿದ್ಯಾರ್ಥಿನಿಯಿಂದ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚು ರೂ. 16,800/- ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟು, ಅದರ ಮುಂಗಡ ಹಣ ರೂ. 5,000/- ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಆರೋಪಿ ಆರಂಭದಲ್ಲಿ ಹತ್ತು ಸಾವಿರ, ಬಳಿಕ ನಾಲ್ಕು ಸಾವಿರ ಹಣವನ್ನು ಲಂಚವಾಗಿ ಪಡೆದು ಮತ್ತೆ 16800/- ರೂ. ಪಡೆಯಲು ಬೇಡಿಕೆ ಸಲ್ಲಿಸಿದ್ದರು.
ಲೋಕಾಯುಕ್ತ ಪೊಲೀಸರು ಮಂಡಿಸಿದ ಒಟ್ಟು 9 ಸಾಕ್ಷಿದಾರರ ಸಾಕ್ಷಿ ವಿಚಾರಣೆ ನಡೆಸಿದ ನ್ಯಾಯಾಲಯ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಅವರ ವಾದವನ್ನು ಪುರಸ್ಕರಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಆರೋಪಿಗೆ ಒಟ್ಟು 5 ವರ್ಷ ಸಾದಾ ಸಜೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.