
Kulashekhara landslide- ಕುಲಶೇಖರ ಗುಡ್ಡ ಕುಸಿತ ಪ್ರದೇಶಕ್ಕೆ ಲೋಬೋ ಭೇಟಿ, ಶಾಶ್ವತ ಪರಿಹಾರಕ್ಕೆ ಒತ್ತಾಯ
ಭಾರೀ ಮಳೆಯಿಂದ ಕುಲಶೇಖರದ ಬಳಿ ರೈಲ್ವೆ ಹಳಿಗೆ ಗುಡ್ಡ ಕುಸಿದು ಭಾರಿ ಪ್ರಮಾಣದ ಮಣ್ಣು ಬಿದ್ದಿದೆ. ಇದರಿಂದಾಗಿ ರೈಲು ಸಂಚಾರಕ್ಕೆ ತೊಡಕಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕುಲಶೇಖರ -ಕೊಂಗುರುಮಠ ಬಳಿ ರೈಲ್ವೆ ಹಳಿಗೆ ಗುಡ್ಡೆ ಕುಸಿತದಿಂದ ರೈಲ್ವೆ ಸಂಚಾರಕ್ಕೆ ತೊಡಕುಂಟಾಗಿದೆ. ಈ ರಸ್ತೆ ಕುಸಿದರೆ ಅಲ್ಲಿರುವ ಅನೇಕ ಮನೆಗಳಿಗೂ ಹನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ರಸ್ತೆಯನ್ನು ಉಳಿಸಲು ಸೂಕ್ತ ಕಾಮಗಾರಿ ಆರಂಭಿಸಬೇಕು. ಈ ಭಾಗದಲ್ಲಿ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿ ರಸ್ತೆಯನ್ನು ನಿರ್ಮಿಸಿದ್ದರೆ, ಭೂಕುಸಿತದಿಂದ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದು ಹೇಳಿದರು.
ಇನ್ನಾದರೂ ಈ ಬಗ್ಗೆ ರೈಲ್ವೆ ಇಲಾಖೆ ಮುತುವರ್ಜಿ ವಹಿಸಬೇಕು. ಸಂಸದ ನಳಿನ್ ಕುಮಾರ್ ಕಟೀಲ್ ರವರು ರೈಲ್ವೆ ಇಲಾಖೆ ಮೇಲೆ ಒತ್ತಡ ಹಾಕಿ ಸರಿಯಾಗಿ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಹಾಗೂ ಇನ್ನು ಮುಂದೆ ಈ ಭಾಗದಲ್ಲಿ ಭೂಕುಸಿತವಾಗದಂತೆ ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು ಎಂದರು.
ಭೇಟಿ ವೇಳೆ ಮಾಜಿ ಮೇಯರ್ ಭಾಸ್ಕರ್ ಕೆ., ನಾಯಕರಾದ ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಸವಾನ್ ಎಸ್. ಕೆ., ಯಶವಂತ ಪ್ರಭು, ಕೃತಿನ್ ಕುಮಾರ್, ಶಾನ್ ಡಿ ಸೋಜಾ ಮೊದಲಾದವರು ಉಪಸ್ಥಿತರಿದ್ದರು.