
PIL to Supreme Court- ಪೆಗಾಸಿಸ್ ಭಾರತೀಯ ಸಾರ್ವಭೌಮತ್ವದ ಮೇಲೆ ಗಂಭೀರ ಆಕ್ರಮಣ: ಸುಪ್ರೀಂ ತನಿಖೆಗೆ ಯುವ ಸಂಸದ ಒತ್ತಾಯ
ಒಂದು ವಿದೇಶಿ ಸಂಸ್ಥೆ ಭಾರತದಲ್ಲಿ ಉನ್ನತ ಸ್ಥರದಲ್ಲಿ ಇರುವವರ ಕದ್ದಾಲಿಕೆ ಮಾಡಿರುವುದು ಆತಂಕಕಾಗಿ ಬೆಳವಣಿಗೆ. ಇದು ಭಾರತೀಯ ಸಾರ್ವಭೌಮತ್ವದ ಮೇಲೆ ನಡೆದಿರುವ ಗಂಭೀರ ಆಕ್ರಮಣ. ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಸಿಪಿಎಂ ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಾನ್ ಬ್ರಿಟ್ಟಾಸ್, ಸರ್ವೋಚ್ಚ ನ್ಯಾಯಾಲಯದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಅವರು ಈ ಕೋರಿಕೆ ಸಲ್ಲಿಸಿದ್ದಾರೆ.
ಪ್ರತಿಪಕ್ಷಗಳ ನಾಯಕರು, ಹಿರಿಯ ಪತ್ರಕರ್ತರು, ನಿವೃತ್ತ ಚುನಾವಣಾ ಆಯುಕ್ತರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಿಬ್ಬಂದಿ ಸೇರಿದಂತೆ 300ಕ್ಕೂ ಅಧಿಕ ಪ್ರಮುಖ ಮೊಬೈಲ್ ಫೋನ್‌ಗಳಲ್ಲಿ ಪೆಗಾಸಿಸ್ ಸ್ಪೈವೇರ್ ಅಳವಡಿಸಿ ಗೂಢಚಾರಿಕೆ ನಡೆಸಲಾಗಿತ್ತು ಎಂದು ಪಿಐಎಲ್‌ನಲ್ಲಿ ಸಂಸದ ಬ್ರಿಟ್ಟಾಸ್ ಹೇಳಿದ್ದಾರೆ.
ಈ ಸ್ನೂಪಿಂಗ್ ಗೂಢಚಾರಿಕೆ ಭಾರತದ ಸರ್ಕಾರದಿಂದ ನಿರ್ದೇಶಿತವಾಗಿ ನಡೆದಿದೆಯೇ ಅಥವಾ ವಿದೇಶಿ ಸಂಸ್ಥೆಯಿಂದ ನಿರ್ದೇಶಿತವಾದ ಕಾರ್ಯಾಚರಣೆಯೇ ಎಂಬುದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಉನ್ನತ ಸ್ಥರದ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಅವರು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
ನ್ಯಾಯಾಧೀಶರುಗಳ ಮೊಬೈಲ್‌ನಲ್ಲೂ ಸ್ಪೈವೇರ್ ಹಾಕುವಂಥದ್ದು ನ್ಯಾಯದಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ. ಅದೇ ರೀತಿ, ಮಾಜಿ ಚುನಾವಣಾ ಆಯುಕ್ತರ ಮೊಬೈಲ್‌ನಲ್ಲಿ ಕದ್ದಾಲಿಕೆ ಮಾಡಿರುವುದು ಪ್ರಜಾಪ್ರಭುತ್ವದ ಮೂಲಭೂತ ವ್ಯವಸ್ಥೆ ಮೇಲೆ ಮಾಡಿರುವ ಆಕ್ರಮಣ. ಇದು ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ವ್ಯವಸ್ಥೆಯನ್ನು ಅಲುಗಾಡಿಸುವಂತಿದೆ ಎಂದು ಅವರು ಆರೋಪಿಸಿದ್ದಾರೆ.