
Raitha Sangha- ತೈಲ ಬೆಲೆ ಏರಿಕೆಯಿಂದ ರೈತರು ಸಂಕಷ್ಟದಲ್ಲಿ: ಮೀನುಗಾರರ ಮಾದರಿಯಲ್ಲಿ ರೈತರಿಗೂ ಸಬ್ಸಿಡಿ ನೀಡಿ- ರೈತ ಸಂಘ ಆಗ್ರಹ
ಗಗನಕ್ಕೇರಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಕೈಗೆಟುಕದಂತಾಗಿದ್ದು, ರೈತ ಸಮುದಾಯ ಕೂಡ ವಿಶೇಷವಾಗಿ ಸಂಕಷ್ಟಕ್ಕೀಡಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ) ಮತ್ತು ಹಸಿರು ಸೇನೆ ಅಭಿಪ್ರಾಯಪಟ್ಟಿದೆ.
ತೈಲ ಬೆಲೆಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರ ದಯನೀಯ ವೈಫಲ್ಯ ಅನುಭವಿಸಿದೆ. ತಕ್ಷಣ ತೈಲ ಬೆಲೆಯನ್ನು ನಿಯಂತ್ರಿಸುವತ್ತ ಗಂಭೀರ ಹಾಗೂ ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿವೆ.
ತೈಲ ಬೆಲೆ ಏರಿಕೆಯಿಂದ ರೈತರಿಗೆ ಅಗತ್ಯವಾಗಿರುವ ಕೃಷಿ ಯಂತ್ರೋಪಕರಣಗಳ ನಿರ್ವಾಹಣೆ ಕಷ್ಟದಾಯಕವಾಗಿದೆ. ಇದರಿಂದ ರೈತ ಸಮುದಾಯ ಕಂಗಾಲಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬಗ್ಗೆ ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿವೆ. ಅದರ ಬದಲು ತಕ್ಷಣ ರೈತರ ಕಲ್ಯಾಣಕ್ಕೆ ದಾವಿಸಬೇಕು ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಸಂಘಟನೆಗಳ ನಾಯಕರು ಆಗ್ರಹಿಸಿದ್ದಾರೆ.
ಮೀನುಗಾರರಿಗೆ ನೀಡುವಂತೆ ರೈತರು ಉಪಯೋಗಿಸುವ ಎಲ್ಲಾ ಯಂತ್ರೋಪಕರಣಗಳಿಗೆ ಡೀಸೇಲ್ ಸಬ್ಸಿಡಿ ತಕ್ಷಣದಿಂದ ಜಾರಿ ಮಾಡಬೇಕು ಎಂದು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಬೈಲುಗುತ್ತು ಶ್ರೀಧರ ಶೆಟ್ಟಿ, ಹಸಿರುಸೇನೆಯ ದಯಾನಂದ ಶೆಟ್ಟಿ, ರೈತ ಮಹಿಳ ವಿಭಾಗದ ವಿಲ್ಮ ಪ್ರಿಯ ಅಲ್ಬುಕರ್ಕ್ ಜಂಟಿ ಹೇಳಿಕೆಯಲ್ಲಿ ಈ ಆಗ್ರಹ ಮಾಡಿದ್ದಾರೆ.