BJP symbol in Ration Shop- ರೇಷನ್ ಅಂಗಡಿಗಳಲ್ಲಿ ಮೋದಿ ಫೋಟೋ, ಬಿಜೆಪಿ ಚಿಹ್ನೆ ಬಳಕೆಗೆ ಸೂಚನೆ!?
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳಿಗೆ ಪಡಿತರ ವಿತರಣಾ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಗೂ ಆಯಾ ರಾಜ್ಯದ ಮುಖ್ಯಮಂತ್ರಿಯ ಚಿತ್ರದ ಜೊತೆಗೆ ಬಿಜೆಪಿ ಚಿಹ್ನೆ ಹೊಂದಿರುವ ಬ್ಯಾನರ್ ಅಳವಡಿಸಲು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ಅನ್ನ ಯೋಜನೆಯನ್ನು ಈ ವರ್ಷದ ಜೂನ್ ವರೆಗೆ ಜಾರಿ ಮಾಡಲಾಗಿತ್ತು. ಇದೀಗ ಈ ಯೋಜನೆಯನ್ನು ನವೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಯೋಜನೆಯ ಜೊತೆಗೆ ಪಕ್ಷದ ಬ್ಯಾನರ್ ಅಳವಡಿಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬ್ಯಾನರ್ ನ ಮಾದರಿಯನ್ನು ಬಿಜೆಪಿಯ ದೆಹಲಿ ಕಚೇರಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಇದನ್ನು ರಾಜ್ಯಗಳಿಗೆ ರವಾನಿಸಲಾಗಿದೆ. ಪಡಿತರದ ಬ್ಯಾಗ್ ಗಳಲ್ಲಿ ಬಿಜೆಪಿಯ ಕಮಲ ಚಿಹ್ನೆ ಇರಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿಯೂ ಪಡಿತರ ಒದಗಿಸುವ ಬ್ಯಾಗ್ ಗಳಲ್ಲಿ ಬಿಜೆಪಿ ಚಿಹ್ನೆ ಕಡ್ಡಾಯವಾಗಿ ಅಳವಡಿಸಲಾಗುವುದು. ಆಯಾ ರಾಜ್ಯಗಳು ಪ್ರದರ್ಶಿಸುವ ಬ್ಯಾನರ್ ನಲ್ಲಿ ಆಯಾ ರಾಜ್ಯದ ಮುಖ್ಯಮಂತ್ರಿಯ ಫೋಟೋದ ಜಾಗದಲ್ಲಿ ಪಕ್ಷದ ಸಂಸದರು ಅಥವಾ ಶಾಸಕರ ಫೋಟೋ ಹಾಕುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.