Shobha Karandlaje- ಸಂಸದೆ ಶೋಭಾ ಸಹಿತ ಸೇರಿದಂತೆ ಮೂವರಿಗೆ ಸಚಿವ ಸ್ಥಾನ ನೀಡಲು ಶ್ರೀನಿವಾಸ್ ಪ್ರಸಾದ್ ಆಗ್ರಹ!
ಮೈಸೂರು: ಆರೋಗ್ಯ ಕಾರಣಗಳಿಂದಾಗಿ ನಾನು ಸಚಿವನಾಗುವುದಿಲ್ಲ. ಉಮೇಶ್ ಜಾಧವ್ ಗೆ ಕೇಂದ್ರ ಮಂತ್ರಿ ಸ್ಥಾನ ನೀಡಬೇಕು. ಅಲ್ಲದೇ ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆಯಾದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿರುವ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್, ಕೇಂದ್ರ ಸಚಿವ ಸಂಪುಟದಲ್ಲಿ ಉಮೇಶ್ ಜಾಧವ್, ಶಿವಕುಮಾರ್ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಇನ್ನೂ ಯೋಗೀಶ್ವರ್ ಜೊತೆಗಿನ ಭೇಟಿ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿರಿಯ ರಾಜಕಾರಣಿ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿ ನನ್ನಲ್ಲಿಗೆ ಬರುತ್ತಾರೆ. ಅವರು ಮೈಸೂರಿಗೆ ಬಂದಾಗಲೆಲ್ಲ ನನ್ನನ್ನು ಭೇಟಿಯಾಗುತ್ತಾರೆ. ಇದರಲ್ಲಿ ಬೇರಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಲ್ಲವೂ ಸರಿಯಾಗಿದೆ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಈಗ ಮುಗಿದ ಅಧ್ಯಾಯ ಎಂದು ಹೇಳಿದ್ದಾರೆ. ಇನ್ನು, ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಐಟಿ ಮುಂದೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿಯ ಬಳಿಕ ಅವರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.